ಜಿಲ್ಲೆ

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿ ದಟ್ಟ ಹೊಗೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸದ ಗುಡ್ಡಕ್ಕೆ ಮಂಗಳವಾರ ಬೆಂಕಿ ಹೊತ್ತಿಕೊಂಡು ವಿವಿಧ ಕಡೆಗಳಲ್ಲಿ ಇಡೀ ದಿನ ದಟ್ಟ ಹೊಗೆ ಆವರಿಸಿಕೊಂಡಿತ್ತು.

ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಮೇಲಿಂದ ಮೇಲೆ ಬೆಂಕಿ ಹೊತ್ತಿಕೊಂಡು ಈ ರೀತಿ ಸಮಸ್ಯೆ ತಲೆದೋರುತ್ತಲೇ ಇದೆ. ಮಂಗಳವಾರವೂ ಮರುಕಳಿಸಿದ್ದರಿಂದ ಟೋಲ್‌ನಾಕಾ, ಜನ್ನತನಗರ, ವಿದ್ಯಾಗಿರಿ ಸುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಹೊಗೆಯಿಂದ ದುರ್ವಾಸನೆ ಹರಡಿದ್ದರಿಂದ ಅಲ್ಲಿನ ನಿವಾಸಿಗಳು ಮನೆಗಳಲ್ಲಿ ಇರಲಾರದಂತಾಗಿತ್ತು.

ಇದರಿAದ ಆಕ್ರೋಶಗೊಂಡ ನಿವಾಸಿಗಳು ಸಂಜೆ ವೇಳೆಗೆ ಟೋಲ್ ನಾಕಾ ಪ್ರದೇಶದಲ್ಲಿ ಜಮಾವಣೆಗೊಂಡಿದ್ದರು. ಈ ಸಮಸ್ಯೆ ಹೋಗಲಾಡಿಸಲು ಪಾಲಿಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕೆಲ ಹೊತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯಾಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು.