ಮೈಸೂರು : ಬಿಜೆಪಿಯ ಕೆಲವು ಮುಖಂಡರು ನನ್ನನ್ನು ಸೋಲಿಸಲು ಹೋಗಿ ಇಡೀ ಬಿಜೆಪಿಯನ್ನೇ ಸೋಲಿಸಿದರು. ಚುನಾವಣೆಯಲ್ಲಿ ಕೆಲವು ಬಿಜೆಪಿ ನಾಯಕರು ನನ್ನನ್ನು ಗುರಿ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಶನಿವಾರ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ ‘16ನೇ ವಿಧಾನಸಭಾ ಚುನಾವಣೆ- ಪ್ರಭಾವ, ಪರಿಣಾಮ ಮತ್ತು ಭವಿಷ್ಯದ ರಾಜಕೀಯ ಆಯಾಮಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿ ಇದೆ. ಅವರ ಹಿಡಿತದಿಂದ ಬಿಜೆಪಿ ಹೊರಬಾರದೆ ಇದ್ದರೆ ಮುಂದಿನ ಚುನಾವಣೆಗಳಲ್ಲಿ ಕಷ್ಟ ಎದುರಿಸುತ್ತದೆ. ಕೇವಲ ಮೋದಿ ವರ್ಚಸ್ಸು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ ಮತ್ತೆ ಪಾಠ ಕಲಿಯುವುದು ನಿಶ್ಚಿತ. ಮೋದಿ ವರ್ಚಸ್ಸು ಜತೆಗೆ ಸ್ಥಳೀಯ ನಾಯಕರ ನಾಯಕತ್ವ ತುಂಬಾ ಮುಖ್ಯ. ಈ ವಿಚಾರವನ್ನು ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ನಲ್ಲೂ ಪ್ರಸ್ತಾಪಿಸಲಾಗಿದೆ ಎಂದರು.
ರಾಮಮಂದಿರ ಚಳವಳಿ ದೇಶದ ಎಲ್ಲ ರಾಜ್ಯಗಳಲ್ಲೂ ನಡೆಯಿತು. ಆದರೆ, ಅದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ರಾಜಕೀಯವಾಗಿ ಲಾಭ ದೊರೆತ್ತಿದ್ದು ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ರಾಮಮಂದಿರ ಚಳವಳಿ ಒಂದು ಕಾರಣವಾದರೆ, ಇಲ್ಲಿನ ಸ್ಥಳೀಯ ನಾಯಕರು ನಡೆಸಿದರೆ ಜನಪರ ಹೋರಾಟ ಕೂಡ ಕಾರಣ. ಸ್ಥಳೀಯವಾಗಿ ಸಮರ್ಥ ನಾಯಕತ್ವ ಇಲ್ಲದೆ ಇದ್ದರೆ ಕೇವಲ ಮೋದಿ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಮೋದಿ ಇಮೇಜ್ ಎಲ್ಲ ರಾಜ್ಯಗಳಲ್ಲೂ ವರ್ಕ್‌ಔಟ್ ಆಗದೆ ಇರಲು ಪ್ರಮುಖ ಕಾರಣವೆಂದರೆ ಸ್ಥಳೀಯ ನಾಯಕತ್ವದ ಕೊರತೆ ಎಂದು ಪ್ರತಿಪಾದಿಸಿದರು.