ಗೋಣಿಕೊಪ್ಪ: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಪರಸ್ಪರ ಅಂತರ ಕಾಯ್ದುಕೊಂಡು ನಡೆಸಲಾಯಿತು.
ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಗೋಣಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಕೈಗಳಿಗೆ ಸ್ಯಾನಿಟೈಸರ್ ಹಾಕಿದರು.
ಕಾವೇರಿ, ಅರ‌್ವತೋಕ್ಲು ಸರ್ವದೈವತಾ, ಕಳತ್ಮಾಡು ಲಯನ್ಸ್, ಗೋಣಿಕೊಪ್ಪ ಕಾಪ್ಸ್ ಕಾಲೇಜುಗಳು ಹಾಗೂ ಹೊರ ರಾಜ್ಯದ 4, ಹೊರ ಜಿಲ್ಲೆಯ 5 ವಿದ್ಯಾರ್ಥಿಗಳು ಸೇರಿ 297 ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆದರು.
ಸಪ್ಲಿಮೆಂಟರಿ ಪರೀಕ್ಷೆ ಕಟ್ಟಿದ್ದ 3 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಬಹುತೇಕ ವಿದ್ಯಾಥಿಗಳು ಸ್ವಂತ ವಾಹನದಲ್ಲಿ ಬಂದಿದ್ದರು. ಕೆಲವು ಗ್ರಾಮಗಳಿಂದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸಲಾಗಿತ್ತು.
ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ ಪರೀಕ್ಷಾ ಜವಾಬ್ದಾರಿ ನಿರ್ವಹಿಸಿದರು. ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಚಂಗಪ್ಪ ಮುಖ್ಯ ಅಧೀಕ್ಷಕರಾಗಿದ್ದರು. ಗೋಣಿಕೊಪ್ಪ ಠಾಣೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.