ಜಿಲ್ಲೆ

ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗುವುದಿಲ್ಲ

ಕಿರಣ್ ಗೌಡ.ಜಿ

ಮದ್ದೂರು: ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೇ ವಿರೋಧ ಮಾಡಿದರು ನಾನು ಎಂದಿಗೂ ರಾಜಿಯಾಗುವುದಿಲ್ಲ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರಸಭೆ ಕಟ್ಟಡದಲ್ಲಿ ಅಳವಡಿಸಿರುವ ನಗರಸಭಾ ಕಾರ್ಯಾಲಯದ ನಾಮ ಫಲಕವನ್ನು ಗುರುವಾರ ಅನಾವರಣಗೊಳಿಸಿ ಮಾತನಾಡಿದರು.

ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೆ ಅದನ್ನು ವಿರೋಧ ಮಾಡುವುದು ಕ್ಷೇತ್ರದಲ್ಲಿ ಮಾಮೂಲಿಯಾಗಿದೆ. ನನಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತ ಮುಖ್ಯ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಮದ್ದೂರು ಪುರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಪಂಚಾಯಿತಿಗಳಿಂದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನೀಡಿದ್ದ ಅನುಮೋದನೆಯ ವರದಿ ಬಳಿಕ ಸಂಬಂಧ ಪಟ್ಟ ಇಲಾಖೆಗೆ ಕಡತಗಳನ್ನು ಕಳುಹಿಸಲಾಗಿತ್ತು. ಆ ನಂತರ ರಾಜ್ಯಪಾಲರು ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೇರಿಸಲು ಅಧಿಸೂಚನೆ ಹೊರಡಿಸಿದ ನಂತರವೇ ನಗರಸಭೆಯಾಗಿ ಪರಿವರ್ತನೆಗೊಂಡಿದಿಯೇ. ಹೊರತು ನಮ್ಮ ಸ್ವಹಿತಕ್ಕಾಗಿ ಅನುಮೋದನೆ ಮಾಡಿಸಿಕೊಂಡಿಲ್ಲ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೆಲ ದಿನಗಳ ಹಿಂದೆ ರೈತ ಮುಖಂಡರು ಹಾಗೂ ಸಾರ್ವಜನಿಕರು ನಗರಸಭೆ ಮಾಡಲು ವಿರೋಧ ಮಾಡಿದರು. ಆಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದೆ. ಆದರೆ, ಯಾರು ಸಹ ಮಾತುಕತೆಗೆ ಬರಲಿಲ್ಲ. ಬಳಿಕ ಮುಷ್ಕರ ಮಾಡಿದ್ರು, ಬೃಹತ್ ಪ್ರತಿಭಟನೆ ಮಾಡಿದ್ರು ಈಗ ನ್ಯಾಯಾಲಯದ ಮೆಟ್ಟಿಲು ಹತ್ತಿಲು ಹಾಗೂ ಪ್ರತಿಭಟನೆ ಮಾಡಲು ಅವರು ಸ್ವತಂತ್ರರಿದ್ದಾರೆ ಎಂದರು.

ಪಟ್ಟಣದಲ್ಲಿ ಹತ್ತಾರು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ರಸ್ತೆ, ಒಳಚರಂಡಿ, ಫುಟ್‌ಪಾತ್, ನಾಲೆಗಳ ನಿರ್ವಹಣಾ ಕೊರತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಂದ ಪಟ್ಟಣ ನರಳುತ್ತಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಹೀಗಾಗಿ ಮದ್ದೂರು ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಲಿದ್ದು, ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬಹುದಾಗಿದೆ ಎಂದು ಹೇಳಿದರು.

ನಗರಸಭಾಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಿದ್ದರಾಜು, ಪ್ರಮೀಳಾ, ಎಂ.ಬಿ.ಸಚಿನ್, ಸುರೇಶ್ ಕುಮಾರ್, ಮಹೇಶ್, ಸರ್ವಮಂಗಳ, ಲತಾ ರಾಮು, ರತ್ನಮ್ಮ, ಸುಮಿತ್ರಾ, ಆಯಿಷಾ ಜುನೇದ್, ಸಿದ್ದರಾಜು, ನಾಮ ನಿರ್ದೇಶನ ಸದಸ್ಯ ಮೋಹನ್, ಕೃಷ್ಣಪ್ಪ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್ ಪುರಸಭಾ ಸಿಬ್ಬಂದಿ ಇದ್ದರು.