ಜಿಲ್ಲೆ

ಅಹಿಂದ ವರ್ಗ ದಂಗೆ ಏಳಲಿದೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದ ಹೆಸರಿನಲ್ಲಿ ವಿನಾಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡುವುದನ್ನು ನಿಲ್ಲಿಸದಿದ್ದರೆ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಅಹಿಂದ ವರ್ಗ ದಂಗೆ ಏಳಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಎಚ್ಚರಿಸಿದರು.

ನಗರದ ಗಾಂಧಿ ವೃತ್ತದ ಗಾಂಧಿ ಪ್ರತಿಮೆ ಎದುರು 2021ರಲ್ಲಿ ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತ ಸಾರ್ವಜನಿಕ ಚರ್ಚೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಹುನ್ನಾರ ಮಾಡುತ್ತಿವೆ. ಹೇಗಾದರೂ ಮಾಡಿ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಒಂದೇ ಉದ್ದೇಶವಿದೆ ಎಂದು ದೂರಿದರು.

ಮುಡಾ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ, ಜೆಡಿಎಸ್ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವುದು ಸರಿಯಷ್ಟೆ. 2021ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಆ ಭ್ರಷ್ಟಾಚಾರದ ರೂವಾರಿ ಆಗಿನ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಮತ್ತು ಅವರ ತಂಡ. ಇದರ ವಿರುದ್ಧ ನಮ್ಮ ವೇದಿಕೆ 2021ರಲ್ಲಿ ಬೃಹತ್ ಹೋರಾಟ ನಡೆಸಿ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸಿ, ಸಿಬಿಐ ತನಿಖೆಗೆ ಆಗ್ರಹಿಸಿತ್ತು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ನಾವು ಜು.26ರಂದು ವಿಜಯೇಂದ್ರ ಅವರಿಗೆ ಪತ್ರ ಬರೆದು ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಮುಕ್ತ ಆಹ್ವಾನ ನೀಡಿದ್ದೆವು. ಆದರೆ, ಅವರು ಸಾರ್ವಜನಿಕ ಚರ್ಚೆಗೆ ಆಗಮಿಸದೆ ಪಲಾಯನ ಮಾಡಿದ್ದಾರೆ. ಇದರ ಉದ್ದೇಶ ಅವರು ಮುಡಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವುದು, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿರುವುದು ಸಾಬೀತಾಗಿದೆ. ಇನ್ನಾದರೂ ಎಚ್ಚೆತ್ತು ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಪಿತೂರಿ ನಿಲ್ಲಿಸಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಅಲ್ಪಸಂಖ್ಯಾತ ಮುಖಂಡ ನಾಸೀರ್, ರೆಸ್ಪಾನ್ಸಿಬಲ್ ಸಿಟಿಜನ್ ವಾಯ್ಸ ವೇದಿಕೆ ಅಧ್ಯಕ್ಷ ಎಂ.ಎಫ್.ಖಲೀಂ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ನಗರ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಎನ್.ಆರ್.ನಾಗೇಶ್, ಮುಖಂಡರಾದ ಲೋಕೇಶ್ ಮಾದಾಪುರ, ಕೇಶವ, ರಾಜಶೇಖರ್, ಶಿವಲಿಂಗಯ್ಯ, ರಹೀಮ್ ಇತರರಿದ್ದರು.