ಜಿಲ್ಲೆ

ನಳಂದ ಮುನ್ನವೇ ರಾಜ್ಯದಲ್ಲಿ ಕನ್ನಡ ವಿವಿ ಇದ್ದವು: ಸಚಿವ ಎಚ್.ಕೆ.ಪಾಟೀಲ್ ಹೇಳಿಕೆ

ಮೈಸೂರು: ನಳಂದ ವಿಶ್ವವಿದ್ಯಾಲಯಕ್ಕಿಂತಲೂ ಹಿಂದೆಯೇ ಕರ್ನಾಟಕದಲ್ಲಿ ಕನ್ನಡ ವಿಶ್ವವಿದ್ಯಾಲಯ ಇತ್ತು ಎನ್ನುವ ಮಾಹಿತಿ ಇದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ವಿಜಯನಗರದಲ್ಲಿರುವ ಶ್ರೀಕಲಾನಿಕೇತನ ಕಾಲೇಜ್ ಆಫ್ ವಿಷುವಲ್ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ಕಲಾವಿದ ಡಾ.ವಿಠ್ಠಲರಡ್ಡಿ ಎಚ್.ಚುಳಕಿ ಅವರ ಏಕವ್ಯಕ್ತಿ ಚಿತ್ರ ಕಲಾ ಪ್ರರ್ದಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಬುರಗಿ ಚಿತ್ತಾಪುರದಲ್ಲಿದ್ದ ನಾಗವಿ ಕನ್ನಡದ ಮೊದಲ ವಿಶ್ವವಿದ್ಯಾನಿಲಯ ಇದ್ದ ಅವಶೇಷ ದೊರೆತಿವೆ. ಇದು ರಾಜ್ಯದ ಮೊದಲ ಕನ್ನಡ ವಿಶ್ವ ವಿದ್ಯಾನಿಲಯ ಎಂಬುದರ ಬಗ್ಗೆ ಮಾಹಿತಿ ಇದೆ. ಈ ಕನ್ನಡ ವಿವಿಯಲ್ಲಿ 250ಕ್ಕೂ ನಾನಾ ಭಾಗದ ವಿದ್ವಾಂಸರಿದ್ದು, ಘಟಿಕೋತ್ಸವ ನಡೆಯುತ್ತಿದ್ದ ಕಟ್ಟಡದ ಕುರುಹುಗಳು ಇರುವುದು ನಾಡಿನ ಹೆಮ್ಮೆಯ ಸಂಗತಿ. ಆದರೆ ಇತಿಹಾಸ ತಜ್ಞರು ಇದನ್ನು ಒಪ್ಪುವುದಿಲ್ಲ. ಸಚಿವನಾಗಿ ಈ ಕನ್ನಡ ವಿವಿಯ ಇತಿಹಾಸದ ಬಗ್ಗೆ ನನಗೆ ನಂಬಿಕೆಯಿದ್ದು, ಆಸಕ್ತರು ಸಂಶೋಧನೆ ನಡೆಸಬೇಕಿದೆ. ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಸ್ಮಾರಕಗಳಿದ್ದು, ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುವ ಅಗತ್ಯ ಇದೆ ಎಂದರು.
ನಮ್ಮ ರಾಜ್ಯದಲ್ಲಿರುವ ಗುಡಿ ಮಾದರಿ ಸ್ಮಾರಕಗಳಿದ್ದು, ಕೆಲವು ನಶಿಸುವ ಹಂತದಲ್ಲಿವೆ. ಆದ್ದರಿಂದ ಅವುಗಳನ್ನು ದತ್ತು ಪಡೆಯಲು ಅಭಿವೃದ್ಧಿಪಡಿಸಲು ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 850 ಸ್ಮಾರಕಗಳನ್ನು ಮಾತ್ರ ಸರ್ಕಾರ ಗುರುತಿಸಿದ್ದು, ದತ್ತು ಸ್ಮಾರಕ ಯೋಜನೆಯಡಿ ಆಸಕ್ತರು ದತ್ತು ಪಡೆದು ಸಂರಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ 550 ಸ್ಮಾರಕಗಳನ್ನು ಗುರುತಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ, ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ಕಾರ್ಯದರ್ಶಿ ಬಾಬುರಾವ್, ಪ್ರಾಂಶುಪಾಲ ಕೆ.ಸಿ.ಮಹದೇವ ಶೆಟ್ಟಿ ಇತರರು ಇದ್ದರು.