ಜಿಲ್ಲೆ

ಕೆಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಅವ್ಯವಹಾರ ನಡೆದಿಲ್ಲ

ಉತ್ತರ ಕನ್ನಡ ಡೆಸ್ಕ್

ಹಳಿಯಾಳ: ತಾಲೂಕಿನಲ್ಲಿ ಸೇವೆ ನೀಡುತ್ತಿರುವ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಏನಾದರೂ ಅವ್ಯವಹಾರ ನಡೆದಿರುವುದನ್ನು ದಾಖಲೆಗಳ ಸಮೇತ ಸಾಬೀತುಪಡಿಸಿದರೆ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಘೋಟ್ನೆಕರ ಸವಾಲು ಹಾಕಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಸದಸ್ಯ ಸುಭಾಸ ಕೋರ್ವೆಕರ ಅವರು ಸ್ವಹಿತಾಸಕ್ತಿಗಾಗಿ ಕೆಡಿಸಿಸಿ ಬ್ಯಾಂಕ್ ಮತ್ತು ತಾಲೂಕಿನ 13 ಸೊಸೈಟಿಗಳಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಪಟ್ಟಣದ ಕೆಡಿಸಿಸಿ ಬಜಾರ್ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿ, ರೈತರಿಗೆ ಅನ್ಯಾಯ ಮಾಡುವುದರ ಜತೆಗೆ ಅವರಿಗೆ ಸಾಲ ಸೌಲಭ್ಯಗಳನ್ನು ನೀಡುವಲ್ಲಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ಇಲ್ಲ ಸಲ್ಲದ ಆರೋಪ ಮಾಡಿರುವ ಕೆಪಿಸಿಸಿ ಸದಸ್ಯ ಸುಭಾಸ ಕೋರ್ವೆಕರ ಅವರು ದಾಖಲೆಗಳ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಕೆಡಿಸಿಸಿ ಬ್ಯಾಂಕ್ ತನ್ನದೆಯಾದ ಗೌರವ ಕಾಪಾಡಿಕೊಂಡು ಬಂದಿದೆ. ತಾಲೂಕಿನ ವಿವಿಧ ಸೊಸೈಟಿಗಳ ಮೂಲಕ ರೈತರಿಗೆ ಸುಮಾರು 100 ಕೋಟಿ ರೂ.ಗೂ ಅಧಿಕ ಸಾಲ ಸೌಲಭ್ಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ಕೆಡಿಸಿಸಿ ಬ್ಯಾಂಕ್ ತನ್ನ ಸೇವೆಯಿಂದ ರಾಷ್ಟ್ರ ಮತ್ತು ರಾಜ್ಯದ ಗಮನ ಸೆಳೆದಿದೆ ಎಂದರು.

ಕೋರ್ವೆಕರ ನೇತೃತ್ವದ ಕಾಂಗ್ರೆಸ್ಸಿಗರ ಈ ಪ್ರತಿಭಟನೆ ಖಂಡಿಸುವುದಾಗಿ ಹೇಳಿದ ಘೋಟ್ನೇಕರ, ರೈತರಿಗೆ ದನದ ಕೊಟ್ಟಿಗೆ, ತಂತಿ ಬೇಲಿ, ಎತ್ತು ಚಕ್ಕಡಿ, ವಾಹನಗಳು, ಕೃಷಿ ಉಪಕರಣಗಳು ಹಾಗೂ ಕೃಷಿ ಜಮೀನುಗಳನ್ನು ಖರೀದಿಸಲು ಕೇವಲ ಶೇ.3 ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಸೃಷ್ಟಪಡಿಸಿದರು.

ಅಲ್ಲದೆ, ಬ್ಯಾಂಕ್‌ಗೆ ಮುತ್ತಿಗೆ ಹಾಕುವುದರ ಮೂಲಕ ರೈತರಿಗೆ ಅವಮಾನ ಮಾಡಲಾಗಿದೆ. ಬ್ಯಾಂಕ್ ನಿರ್ದೇಶಕ ಮತ್ತು ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದರ ಮೂಲಕ ರೈತರ ಆರ್ಥಿಕ ಉನ್ನತಿಗಾಗಿ ದುಡಿಯಲಾಗಿದೆಯೇ ಹೊರತು ಯಾವುದೇಭ್ರಷ್ಟಾಚಾರ ನಡೆಸಿಲ್ಲ. ತಾಲೂಕಿನ ಎಲ್ಲ ಸೊಸೈಟಿಗಳು ಲಾಭದಲ್ಲಿ ಮುಂದುವರೆದಿದ್ದು, ಬಡವರಿಗೆ ಜಿ ಪ್ಲಸ್ 2 ಮನೆಗಾಗಿ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿಯೂ ಸಹಾಯ ಹಸ್ತ ನೀಡಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಕೆಲ ಮುಖಂಡರಿಗೆ ರೈತರ ಅಭಿವೃದ್ಧಿಯನ್ನು ಸಹಿಸಲು ಆಗುತ್ತಿಲ್ಲ. ರೈತರನ್ನು ತುಳಿಯುವ ಹುನ್ನಾರ ನಡೆದಿದೆ. ರೈತರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವುದರ ಮೂಲಕ ಅವರಿಗೆ ಅನ್ಯಾಯವಾಗುವುದನ್ನು ತಡೆಯಲಾಗುವುದು. ರೈತರು ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ. ಬ್ಯಾಂಕ್ ಮತ್ತು ಸೊಸೈಟಿಗಳ ಮೂಲಕ ರೈತರ ಸೇವೆಗೆ ಸದಾ ಸಿದ್ಧರಾಗಿದ್ದೇವೆ ಎಂದರು.

ಸೊಸೈಟಿಗಳ ಅಧ್ಯಕ್ಷರಾದ ಗುಂಡು ಕಕ್ಕೇರಿ, ತುಕಾರಾಮ ಗೌಡಾ, ಗೋಕುಲ ಪಾಕ್ರೆ, ಬಾಲಕೃಷ್ಣ ಗೌಡಾ, ರಾಜು ಸಡೇಕರ, ಲಕ್ಷ್ಮಣ ಬಾಬಣವಾಡಕರ, ನಾಗರಾಜ ಮಾದಪ್ಪಗೌಡ, ಅರ್ಜುನ ಮಿರಾಶಿ, ಸುರೇಶ ಶಿವಣ್ಣವರ, ಇತರರಿದ್ದರು.