ಜಿಲ್ಲೆ

ಕುವೆಂಪು-ಬೇಂದ್ರ ಮಧ್ಯೆ ಇರಲಿಲ್ಲ ಭಿನ್ನಾಭಿಪ್ರಾಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರಕವಿ ಕುವೆಂಪು ಹಾಗೂ ವರಕವಿ ಬೇಂದ್ರೆ ಅವರನ್ನು ಕೆಲವರು ಸಾಂಸತಿಕ ಬಂಡವಾಳವನ್ನಾಗಿ ಹಾಗೂ ಅಸ್ಮಿತೆಗೆ ಬಳಸಿಕೊಂಡರು. ವೈಯಕ್ತಿಕ ನೆಲೆಯಲ್ಲಿ ಇಬ್ಬರು ಕವಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಪರಸ್ಪರ ಗೌರವ ಹಾಗೂ ವಿಶ್ವಾಸವಿತ್ತು ಎಂದು ಹಿರಿಯ ಸಾಹಿತಿ ರಾಜೇಂದ್ರ ಚೆನ್ನಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಸಂಗಾತ ಪುಸಕ್ತ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ಕಾರಿ ಶಾಲೆ ಶಿಕ್ಷಕ ರಾಜೇಂದ್ರ ಬಡಿಗೇರ ರಚನೆಯ ಯುಗದ ಕವಿ (ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ) ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಕುವೆಂಪು ಜೊತೆಗಿದ್ದು ಅವರ ಕೃತಿಗಳ ಬಗ್ಗೆ ಬರೆದವರು ಅವರ ಸಮಾಜದವರಾಗಿದ್ದರು. ಕುವೆಂಪು ವಿರೋಧಿಗಳು ಬ್ರಾಹ್ಮಣರು. ಬೇಂದ್ರೆ ವಿರೋಧಿಗಳು ಲಿಂಗಾಯತರು ಎನ್ನುವಂತಾಗಿತ್ತು. ಆದರೆ, ಇಬ್ಬರಲ್ಲೂ ವೈಯಕ್ತಿಕವಾಗಿ ವೈಮನಸ್ಸು ಉಂಟಾಗಿರಲಿಲ್ಲ. ಕುವೆಂಪು ಪರವಾಗಿ ಬೇಂದ್ರೆ ಯುಗದ ಕವಿ ಕೃತಿ ಬರೆದಿರುವುದು ನಮ್ಮ ಎದುರಿಗಿದೆ ಎಂದರು.
ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಬೇಂದ್ರೆ-,ಕುವೆಂಪು ಕುರಿತ ಲೇಖಕರ 441 ವಾಗ್ವಾದದ ಹೇಳಿಕೆಗಳನ್ನು ಹೆಕ್ಕಿ ತೆಗೆದು ಕವಿಗಳಿಬ್ಬರ ಸಂಬಂಧವನ್ನು ಕನ್ನಡ ಸಂಸತಿ ಲೋಕದ ನೆಲೆಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಕನ್ನಡ ಸಂಸತಿ ಬಗ್ಗೆ ಆಳವಾದ ಕಳಕಳಿಯಿಂದ ಬರೆದಿದ್ದಾರೆ ಎಂದರು.
ಅರವಿಂದ ಮಾಲಗತ್ತಿ ಕೃತಿ ಕುರಿತು ಮಾತನಾಡಿ, ಸಮಾಜದ ಪರಿವರ್ತನೆ, ಬದಲಾವಣೆಗೆ ಸಾಹಿತ್ಯ ಅಗತ್ಯ. ಅಂತಹ ಸಮಾಜದ ಪರಿವರ್ತನೆಯ ಕೃತಿ ಇದಾಗಿದ್ದು, ಜಾತಿ -ವರ್ಣ ಅಪಾಯಕಾರಿ. ಇಂತಹ ಸಂದರ್ಭದಲ್ಲಿ ಕುವೆಂಪು -ಬೇಂದ್ರೆ ಕುರಿತಾದ ವಾಗ್ವಾದಗಳನ್ನು ಬಡಿಗೇರ ಅವರು ಎಲ್ಲೂ ಜೋಲು ತಪ್ಪದೆ ಮೂಲ ಕೃತಿಕಾರರು ಮಂಕಾಗದಂತೆ ವಿಷಯ ನಿರೂಪಿಸಿದ್ದಾರೆ. ಆದರೆ, ಕೃತಿಯಲ್ಲಿ ಬಳಸಿರುವ ಹೇಳಿಕೆಗಳು ಯಾವ ಸಂದರ್ಭ ಮತ್ತು ಕಾಲದಲ್ಲಿ ಹೇಳಲಾಗಿತ್ತು ಎಂಬುದನ್ನು ದಾಖಲಿಸಿದ್ದರೆ ಕೃತಿಗೆ ಇನ್ನಷ್ಟು ತೂಕ ಬರುತ್ತಿತ್ತು. ಇಷ್ಟಾಗಿಯೂ ಕೃತಿ ಚರ್ಚೆಗೆ ಬರಲಿ ಎಂದು ಹಾರೈಸಿದರು.
ಪ್ರಕಾಶಕ ಟಿ.ಎಸ್​. ಗೊರವರ ಪ್ರಾಸ್ತಾವಿಕವಾಗಿ ಮಾತನಾಡಿ, ಯುಗದ ಕವಿ ಕೃತಿ ವಾಗ್ವಾದ ಪರಂಪರೆ ಹುಟ್ಟುಹಾಕಿದೆ. ಪ್ರಸ್ತುತ ವಿಮರ್ಶೆ, ಸಂವಾದ ಗೌನವಾಗುತ್ತಿದೆ. ಕಾವ್ಯ, ಕಥೆಗಳು ಬರೀ ಮೆಚ್ಚುಗೆ ಬಯಸುತ್ತಿವೆಯೇ ಹೊರತು ವಿಮರ್ಶೆಗೆ ಒಳಗಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯುಗದ ಕವಿ ಹೆಚ್ಚು ವಿಮರ್ಶೆಗೆ ಒಳಗಾಗಲಿ ಎಂದರು.
ಕೃತಿಕಾರ ರಾಜೇಂದ್ರ ಬಡಿಗೇರ ಮಾತನಾಡಿದರು. ನಂತರ ನೆಡದ ಸಂವಾದದಲ್ಲಿ ಶಶಿಧರ ತೋಡಕರ, ಶಿವಶಂಕರ ಹಿರೇಮಠ, ಅನಸೂಯಾ ಕಾಂಬಳೆ, ಸಿ.ಬಿ.ಐನಳ್ಳಿ ಇದ್ದರು. ರಂಗನಾಥ ಕಂಟನಕುಂಠೆ ನಿರೂಪಿಸಿದರು.