ಮೈಸೂರು: ಅಂತರ್ಜಾತಿ ವಿವಾಹವಾಗಬೇಕೆಂಬ ಆಸೆ ನನಗೂ ಇತ್ತು. ಆದರೆ, ಹುಡುಗಿಯೇ ಒಪ್ಪಲಿಲ್ಲ…!’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜನಸ್ಪಂದನ ಟ್ರಸ್ಟ್ ಹಾಗೂ ಮಾನವಮಂಟಪ ಸಂಸ್ಥೆ ಸಹಯೋಗದಲ್ಲಿ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ಸಭೆ ಮತ್ತು ಅಂತರ್ಜಾತಿ ದಂಪತಿಗಳ ನೋಂದಣಿ ಮಾಡುವ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಮೈಸೂರಿನಲ್ಲಿ ನಾನು ಕಾನೂನು ವ್ಯಾಸಂಗ ಮಾಡುತ್ತಿದ್ದೆ. ಆಗ ಒಬ್ಬ ಹುಡುಗಿಯೊಂದಿಗೆ ಸ್ನೇಹ ಬೆಳೆದಿತ್ತು. ಇದಕ್ಕೆ ಬೇರೆ ಅರ್ಥ ಬೇಡ. ಆ ಅನ್ಯ ಜಾತಿಯ ಯುವತಿಯೊಂದಿಗೆ ಮದುವೆ ಸಹ ಆಗಬೇಕೆಂದುಕೊಂಡೆ. ಆದರೆ, ಹುಡುಗಿ, ಆಕೆಯ ಕುಟುಂಬದವರು ಸಮ್ಮತಿಸಲಿಲ್ಲ. ಹೀಗಾಗಿ, ನಮ್ಮ ಜಾತಿಯ ಯುವತಿಯನ್ನೇ ಮದುವೆಯಾಗಬೇಕಾಯಿತು. ಹೀಗಾಗಿ, ಅಂತರ್ಜಾತಿ ವಿವಾಹದ ಕುರಿತು ಮಾತನಾಡಲು ನನಗೆ ನೈತಿಕತೆ ಇದೆಯೋ..ಇಲ್ಲವೋ ಗೊತ್ತಿಲ್ಲ ಎಂದರು.
ಅಂತರ್ಜಾತಿ ವಿವಾಹ, ಆರ್ಥಿಕ ಮತ್ತು ಸಾಮಾಜಿಕ ಸಬಲತೆಯಿಂದ ಜಾತಿ ನಾಶ ಸಾಧ್ಯ. ಇಲ್ಲವಾದರೆ ಸಮಾಜದಲ್ಲಿ ಬದಲಾವಣೆ ಕಷ್ಟಕರ. ರಾಜ್ಯದಲ್ಲಿ 7 ಕೋಟಿ ಜನರಿದ್ದಾರೆ. ಅದರಲ್ಲಿ ಎಷ್ಟು ಜನರು ಅಂತರ್ಜಾತಿ ವಿವಾಹವಾಗಿದ್ದಾರೆ? ಅವರ ಸಂಖ್ಯೆ ಬಹಳ ಕಡಿಮೆ ಇದೆ. ಸ್ವಾವಲಂಬನೆ, ಆರ್ಥಿಕ ಶಕ್ತಿ ಬಂದರೆ ಮಾತ್ರ ಯಾರು ಬೇಕಾದರೂ ಅಂತರ್ಜಾತಿ ಮದುವೆಗೆ ಮುಂದಾಗುತ್ತಾರೆ. ಇದರಿಂದ ಸಮ ಸಮಾಜ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಶಕ್ತಿ ತುಂಬಲು, ಅವರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು.
ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ, ಬೆಂಬಲ ಇದೆ. ಇದಕ್ಕೆ ಸಹಕಾರವನ್ನೂ ಕೊಡಲಾಗುತ್ತದೆ. ಜತೆಗೆ, ಸರ್ಕಾರದಿಂದ ಸಹಾಯ, ಸೌಲಭ್ಯವನ್ನೂ ನೀಡಲಾಗುತ್ತದೆ. ಈ ರೀತಿ ವಿವಾಹವಾದವರಿಗೆ ನನ್ನ ಅನಂತ ಧನ್ಯವಾದಗಳು ಎಂದರು.
ತಳ ಸಮುದಾಯದ ಜನರಿಗೆ, ಶೋಷಿತರಿಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರೃ ದೊರೆಯದಿದ್ದರೆ ರಾಜಕೀಯ ಸ್ವಾತಂತ್ರೃ ಯಶಸ್ವಿಯಾಗಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು ಅಕ್ಷರಶಃ ನಿಜವಾಗಿದೆ. ಈಗಲೂ ಜಾತಿ ವ್ಯವಸ್ಥೆ ಹೋಗುವ ಬದಲು ಇನ್ನಷ್ಟು ಗಟ್ಟಿಯಾಗಿದೆ. ಚಲನರಹಿತ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ಇರಲ್ಲ. ಭಗವಾನ್ ಬುದ್ಧ, ಬಸವಣ್ಣ ಸೇರಿದಂತೆ ಅನೇಕ ಸುಧಾರಕರು ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನ ಮಾಡಿದರು. ಆದರೆ, ಯಶಸ್ಸು ದೊರೆತಿಲ್ಲ ಎಂಬ ಚಿತ್ರಣ ಗೋಚರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸವಣ್ಣನವರನ್ನು ಪೂಜೆ ಮಾಡುವ ಕೆಲವರು ಜಾತಿ ಮಾಡುತ್ತಾರೆ. ವಿದ್ಯಾವಂತರೂ ಜಾತಿವಾದಿಗಳಾಗಿದ್ದಾರೆ. ಮನುಷ್ಯರ ನಡುವೆ ಪ್ರೀತಿ ಇರಬೇಕೇ ಹೊರತು, ದ್ವೇಷವಲ್ಲ. ಆಗ ಮಾತ್ರ ಮಾನವರಾಗಲು ಸಾಧ್ಯ. ಎಲ್ಲರೂ ವಿಶ್ವಮಾನವರಾಗಬೇಕು. ಅಲ್ಪಮಾನವರಾಗಬಾರದು ಎಂದರು.
ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ಅಂತರ್ಜಾತಿ, ಅನ್ಯ ಧರ್ಮೀಯರು ಸಮಾಜದ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ. ಅವರಿಗೆ ಸುರಕ್ಷತೆ ಕಲ್ಪಿಸಿಬೇಕು. ಆಪ್ತ ಸಂಬಂಧದ ಪರಿಣಾಮಕಾರಿ ವಲಯವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ರಚನಾತ್ಮಕ ಕೆಲಸ ಮಾಡಬೇಕಿದೆ ಎಂದರು.
ಇತ್ತೀಚೆಗೆ ಕೆಲ ಅನ್ಯ ಜಾತಿ ವಿವಾಹಗಳು ಕವಲುದಾರಿಯಲ್ಲಿ ಸಾಗಿವೆ. ಸಾಮಾಜಿಕ, ಆರ್ಥಿಕ ಭದ್ರತೆ ಇಲ್ಲದೆ ಒಂಟಿಯಾಗಿ ಇವರು ಸಮುದಾಯದಿಂದ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಆದ್ದರಿಂದ ಈ ರೀತಿ ವಿವಾಹವಾಗುವವರು ಮೊದಲು ಪೂರ್ವಸಿದ್ಧತೆ ಮಾಡಿಕೊಂಡು ಸಮಸ್ಯೆಯನ್ನು ಎದುರಿಸಲು ಅಣಿಯಾಗಬೇಕು ಎಂದರು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ರಂಗಕರ್ಮಿ ಸಿ.ಬಸವಲಿಂಗಯ್ಯ, ಚಿಂತಕ ಜಿ.ಪಿ.ಬಸವರಾಜು, ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ, ಕೆಪಿಸಿಸಿ ವಕ್ತಾರರಾದ ಎಚ್.ಎ.ವೆಂಕಟೇಶ್, ಎಂ.ಲಕ್ಷ್ಮಣ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಇನ್ನಿತರರಿದ್ದರು.