ಶಿವಮೊಗ್ಗ: ಒಂದು ಟೋಲ್‌ನಿಂದ ಮತ್ತೊಂಡು ಟೋಲ್‌ಗೆ ಕನಿಷ್ಠ 60 ಕಿಮೀ ಅಂತರವಿರಬೇಕೆಂಬ ನಿಯಮವಿದೆ. ಆದರೆ ಶಿವಮೊಗ್ಗ ಮತ್ತು ಶಿಕಾರಿಪುರ ತಾಲೂಕಿನಲ್ಲಿ ತಲಾ ಒಂದು ಟೋಲ್‌ಗೇಟ್ ಇದ್ದು, ಇವುಗಳ ನಡುವೆ 30 ಕಿಮೀ ಮಾತ್ರ ಅಂತರವಿದೆ. ತಾಂತ್ರಿಕವಾಗಿ ಇದು ಸರಿಯಲ್ಲ. ಎರಡು ಪಟ್ಟು, ಮೂರು ಪಟ್ಟು ಹಣ ವಸೂಲಿ ಮಾಡಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಬಿ.ವೈ.ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಅಲ್ಲಿಗೆ ಮುತ್ತಿಗೆ ಹಾಕಲಾಗುವುದು. ದುಪ್ಪಟ್ಟು ಹಣ ವಸೂಲಿ ಮಾಡಿರುವುದಕ್ಕೆ ದಂಡ ವಿಧಿಸಲು ಅವಕಾಶವಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಕೆಶಿಪ್‌ನಿಂದ ಟೆಂಡರ್ ಆಗಿತ್ತು. ವಿಶ್ವ ಬ್ಯಾಂಕ್‌ನಿಂದ ಅನುದಾನ ಬಂದಿತ್ತು. ನಮ್ಮ ಸರ್ಕಾರ ಇರುವವರೆಗೂ ಆ ಮಾರ್ಗದಲ್ಲಿ ಟೋಲ್ ವಿಧಿಸಲು ಅವಕಾಶ ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಲ್ಲಿ ಟೋಲ್‌ಗೇಟ್ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೋಗದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸಂಪೂರ್ಣವಾಗಿ ಮೂಲ ಸೌಕರ್ಯ ಒದಗಿಸಿಲ್ಲ. ಅದೆಲ್ಲವೂ ಪೂರ್ಣಗೊಂಡ ಬಳಿಕ ಜಲಪಾತ ವೀಕ್ಷಣೆಗೆ ಪ್ರವೇಶ ದರ ಹೆಚ್ಚಿಸಬಹುದಿತ್ತು ಎಂಬುದು ನನ್ನ ಅನಿಸಿಕೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ವೀಕ್ಷಣೆಗೆ ಪ್ರತಿಯೊಬ್ಬರಿಗೂ ಸಮಯ ನಿಗದಿ ಮಾಡಿರಬಹುದು ಎಂದರು.