ಜಿಲ್ಲೆ

ಪ್ರೀತಿಸಲು, ದ್ವೇಷಿಸಲು ಕಾರಣ ಇರಬೇಕು

ಅವಿನಾಶ್ ಜೈನಹಳ್ಳಿ

ಯಾರನ್ನೇ ಪ್ರೀತಿಸಲು ಮತ್ತು ದ್ವೇಷಿಸಲು ಸರಿಯಾದ ಕಾರಣವಿರಬೇಕು. ಕಾರಣವಿಲ್ಲದೆ ಪ್ರೀತಿಸುವುದು ಮತ್ತು ದ್ವೇಷಿಸುವುದು ವ್ಯರ್ಥ ಎಂದು ಜೆಎನ್‌ಯು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.


ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಹಾಗೂ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಸಹಯೋಗದಲ್ಲಿ ಭಾನುವಾರ ಸ್ವರಸ್ವತಿಪುರಂನ ರೋಟರಿ ವೆಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಆಲಕೆರೆ ಜೆ.ರಾಮಲಿಂಗೇಗೌಡ ಅವರು ಕನ್ನಡಕ್ಕೆ ಅನುವಾದಿಸಿರುವ ಫರ್ರುಕ್ ಧೊಂಡಿಯವರ ‘ಜಲಾಲುದ್ದೀನ್ ರೂಮಿ’ ಎಂಬ ಸೂಫಿಗೀತೆಗಳ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಹಿಂದುಗಳ ಜತೆಗೆ 1500 ವರ್ಷಗಳಿಂದ ಬದುಕುತ್ತಿರುವ ಮುಸ್ಲಿಮರು ಹಿಂದುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಹಾಗೆಯೆ, ಮುಸ್ಲಿಮರ ಬಗ್ಗೆ ಹಿಂದುಗಳು ತಿಳಿದುಕೊಂಡಿರುವುದೂ ಬಹಳ ಕಡಿಮೆ. ಮುಸ್ಲಿಮರು ಮೈಕು ಹಾಕಿ ಪ್ರಾರ್ಥನೆ ಮಾಡುತ್ತಾರೆ. ನಮಗೆ ಕಿರಿಕಿರಿಯಾಗುತ್ತದೆ. ಹಾಗೆ ಪ್ರಾರ್ಥನೆ ಮಾಡುವುದನ್ನು ಬಂದ್ ಮಾಡಬೇಕು ಎನ್ನುವ ಹಿಂದುಗಳು, ಅವರು ಏನೆಂದು ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಆದ್ದರಿಂದ ನಮ್ಮ ಜತೆಯಲ್ಲಿ, ನಡುವೆ ಬದುಕುತ್ತಿರುವವರ ಬಗ್ಗೆ ಹೆಚ್ಚು ತಿಳಿವಳಿಕೆ ಬಂದಾಗಲೇ ಸಮಾಜದಲ್ಲಿ ಸಾಮರಸ್ಯ ಬರಲು ಸಾಧ್ಯ ಎಂದರು.

ಜಾತಿ, ಧರ್ಮಗಳ ವಿಷಯದಲ್ಲಿ ಜನಸಾಮಾನ್ಯರಲ್ಲಿ ಇರದ ಸಮಸ್ಯೆಗಳು, ಬೌದ್ಧಿಕ ಜೀವಿಗಳಲ್ಲಿ ಮತ್ತು ವಿದ್ಯಾವಂತರಲ್ಲಿ ಇದೆ. 7ನೇ ಶತಮಾನದಿಂದಲೂ ಹಗ್ಗ, ಮೀನು, ಮೆಣಸು, ಉಪ್ಪು, ಬೆಲ್ಲ ಮಾರಾಟ ಮಾಡುತ್ತಾ ಬಂದ ಮುಸ್ಲಿಮರು ಕರಾವಳಿಯಲ್ಲಿ ಬೆರತು ಹೋಗಿದ್ದಾರೆ. ಈ ಕಾರಣದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯಲ್ಲಿ ಇಂದಿಗೂ ಬ್ಯಾರಿ ಭೂತ, ಆಲೀ ಭೂತ, ಬಬ್ಬರ್ಯಾ ಭೂತ… ಹೀಗೆ 19 ಮುಸ್ಲಿಂ ಭೂತಗಳನ್ನು ಆರಾಧಿಸಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಸಮಸ್ಯೆ ಎನಿಸಿಲ್ಲ ಎಂದರು.

ಆಲಕೆರೆ ಜೆ.ರಾಮಲಿಂಗೇಗೌಡ ಅನುವಾದಿಸಿರುವ ಜಲಾಲುದ್ದೀನ್ ರುಮಿ ಎಂಬ ಸೂಫಿಗೀತೆಗಳ ಕೃತಿ, ಸಡಿಲವಾಗಬೇಕಿದ್ದ ಜಾತಿಯತೆಯು ಗಟ್ಟಿಯಾಗುತ್ತಿರುವ ಈ ದಿನಗಳಲ್ಲಿ ಯುನಿವರ್ಸಲ್ ಬ್ರದರ್‌ಹುಡ್ ಕೈಪಿಡಿಯಾಗಿದೆ. ತುಂಬ ಸರಳವಾಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳು ಓದಿ ಅರ್ಥೈಸಿಕೊಳ್ಳಬಹುದಾದ ಪುಸ್ತಕ. ಸೂಫಿಸಂತನ ಕಡೆಗೆ ಗಮನವನ್ನು ಹೆಚ್ಚಿಸುತ್ತದೆ ಎಂದರು.
ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಲೇಖಕ ಆಲಕೆರೆ ಜೆ.ರಾಮಲಿಂಗೇಗೌಡ, ಪರಿಷತ್ ಕಾರ್ಯದರ್ಶಿ, ವಕೀಲ ಎನ್.ಸಿ.ತಮ್ಮಣ್ಣಗೌಡ, ಪ್ರಕಾಶಕರಾದ ಪ್ರತಿಭಾ ಮುರಳಿ ಇದ್ದರು.