ಮೈಸೂರು: ಜಗತ್ತಿನ ವಿದ್ಯಾಮಾನಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಶಿಕ್ಷಕರ ನೇಮಕಾತಿ ಬೇಕಿಲ್ಲ ಎಂದು ಸರ್ಕಾರ ತೀರ್ಮಾನಿಸಿದರೆ ಆಶ್ಚರ್ಯವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಇತಿಹಾಸ ವೇದಿಕೆಯಿಂದ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಇತಿಹಾಸ ಸಂಭ್ರಮದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಜಾಗತಿಕ ಇತಿಹಾಸ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ, ವರ್ಚ್ಯುವಲ್ ರಿಯಾಲಿಟಿ, ಚಾಟ್‌ಬಾಟ್ ಸೇರಿದಂತೆ ನೂತನ ತಂತ್ರಜ್ಞಾನಗಳು ಮನುಷ್ಯನ ಸೃಜನಶೀಲತೆ ಕಸಿಯುತ್ತಿವೆ. ಜಗತ್ತಿನ ವಿದ್ಯಾಮಾನಗಳನ್ನು ಗಮನಿಸಿದರೆ ಶಿಕ್ಷಕರಿಗೆ ಭವಿಷ್ಯವಿಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. 2030ರ ವೇಳೆಗೆ ಶಿಕ್ಷಕರ ನೇಮಕಾತಿ ಬೇಕಿಲ್ಲ ಎಂದು ಸರ್ಕಾರ ತೀರ್ಮಾನ ಮಾಡಿದರೆ ಆಶ್ಚರ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಷಣಮಾತ್ರದಲ್ಲಿ ಎಲ್ಲವೂ ಸಿಗುತ್ತಿವೆ. ಆದರೆ ತಂತ್ರಜ್ಞಾನ ಮನುಷ್ಯನ ನೆರವಿಗೆ ಬಳಸಿಕೊಳ್ಳಬೇಕೇ ಹೊರತು ಅವನ ಸ್ಥಾನವನ್ನು ಆಕ್ರಮಿಸುವಂತೆ ಮಾಡಬಾರದು. ಎಲ್ಲ ರಂಗದಲ್ಲೂ ತಂತ್ರಜ್ಞಾನವನ್ನು ಅತಿಯಾಗಿ ನೆಚ್ಚಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಪ್ರಕೃತಿಗೆ ವಿರುದ್ಧವಾಗಿ ಮನುಷ್ಯ ಮುನ್ನಡೆಯುತ್ತಿದ್ದು, ಮಗುವಿನ ಹುಟ್ಟಿಗೂ ತಾಯಿ, ತಂದೆ ಅಗತ್ಯವಿಲ್ಲ ಎನ್ನುವ ಹಂತಕ್ಕೆ ತಂತ್ರಜ್ಞಾನ ಬಂದಿದೆ. ಹೀಗಾಗಿ ಪ್ರನಾಳ ಶಿಶುಗಳನ್ನು ಸೃಷ್ಟಿಸಲಾಗುತ್ತಿದ್ದು, ಮುಂದೆ ಅನಾಹುತ ಎದುರೇ ಇದೆ ಎಂಬುದನ್ನು ಮರೆಯುತ್ತಿದ್ದಾನೆ. ವಿಜ್ಞಾನ ಬೇಕಿರುವುದು ಜ್ಞಾನಕ್ಕಾಗಿ, ನಾಶಕ್ಕಾಗಿ ಅಲ್ಲ ಎಂದು ಎಚ್ಚರಿಸಿದರು.
ಶಿಕ್ಷಕರು, ಉಪನ್ಯಾಸಕರು ತಂತ್ರಜ್ಞಾನ ಒಡ್ಡಿರುವ ಸವಾಲುಗಳನ್ನು ಮೀರಬೇಕು. ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳಬೇಕು. ಎಲ್ಲ ಮಾಹಿತಿಯೂ ಅಂಗೈಯಲ್ಲಿಯೇ ಸಿಗುವಾಗ ಜ್ಞಾನವನ್ನು ಭಿನ್ನವಾಗಿ ಮಕ್ಕಳಿಗೆ ದಾಟಿಸುವ ಕೌಶಲ ಸಿದ್ಧಿಸಿಕೊಳ್ಳಬೇಕು. ಯಾವುದೇ ಅತ್ಯುನ್ನತ ತಂತ್ರಜ್ಞಾನವೂ ಮನುಷ್ಯನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟ್ಟುಕೊಳ್ಳಬೇಕು ಎಂದರು.
ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಉದಯಶಂಕರ್ ಅವರು, ವಾಟ್ಸ್‌ಆ್ಯಪ್‌ನಲ್ಲಿರುವ ಕೃತಕ ಬುದ್ಧಿಮತ್ತೆಯಲ್ಲಿ ಏನೇ ಸಂದೇಶ ಕಳುಹಿಸಿದರೂ ಸುಲಭವಾಗಿ ಮಾಹಿತಿ ಸಿಗುತ್ತಿದೆ. ಉಪನ್ಯಾಸಕರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಹೋರಾಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಿಡಿಪಿಯು ಎಂ.ಮರಿಸ್ವಾಮಿ, ವೇದಿಕೆ ಗೌರವಾಧ್ಯಕ್ಷ ಎಂ.ಪಿ.ಚಂದ್ರಶೇಖರ್, ಕಾರ್ಯಾಧ್ಯಕ್ಷರಾದ ಎ.ಎಲ್.ಉಮೇಶ್, ಎನ್.ಎಂ.ಶಿವಪ್ರಕಾಶ್, ಅಧ್ಯಕ್ಷ ಎಚ್.ಬಿ.ವಾಸು, ವಿವಿಧ ಸರ್ಕಾರಿ ಪಿಯು ಕಾಲೇಜುಗಳ ಪ್ರಾಂಶುಪಾಲರಾದ ಬಿ.ಆರ್.ಶಂಕರ್ ನಾರಾಯಣ, ಶಿವಮಲ್ಲು ಇದ್ದರು.