ಜಿಲ್ಲೆ

ಎಲ್ಲದಕ್ಕೂ ದುಡ್ಡಿದೆ, ಅಭಿವೃದ್ಧಿ ಮಾಡ್ತೇವೆ

ದೀಪಕ ತಲವಾಯಿ

ಹೊನ್ನಾವರ: ‘ಸರ್ಕಾರದಲ್ಲಿ ಅಭಿವೃದ್ಧಿಗೂ ದುಡ್ಡಿದೆ; ಪಂಚ ಗ್ಯಾರಂಟಿ ಯೋಜನೆಗಳಿಗೂ ದುಡ್ಡಿದೆ. ಅಭಿವೃದ್ಧಿ ಸಂಬಂಧ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತೇವೆ’ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಹಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕೋಟಿ ರೂ.ಗಳಿಗಿಂತ ಹೆಚ್ಚು ಹಣ 5 ಗ್ಯಾರಂಟಿ ಯೋಜನೆಗಳಿಗೆ ಬಂದಿದೆ. ಗ್ಯಾರಂಟಿ ಯೋಜನೆಯನ್ನು ಜನರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ ಎಂದರು. ಕ್ಷೇತ್ರದಲ್ಲಿ ಪ್ರತಿ ವಾರ ಎರಡು ದಿನ ಜನಸಂಪರ್ಕ ಸಭೆ ನಡೆಸುತ್ತೇನೆ. ಭಟ್ಕಳ ಮತ್ತು ಹೊನ್ನಾವರ ತಾಲೂಕಿನಲ್ಲಿ ವಾರಕ್ಕೆ ಒಂದೊಂದು ದಿನ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಸಾರ್ವಜನಿಕರು ವಿವಿಧ ಅಹವಾಲುಗಳನ್ನು ಸಲ್ಲಿಸಿದರು. ಮನವಿ ಪತ್ರಗಳನ್ನು ಪರಿಶೀಲಿಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಹೊನ್ನಾವರ ತಾಲೂಕಿನ ಗ್ಯಾರಂಟಿ ಯೋಜನೆ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸಚಿವರು ಐಡಿ ಕಾರ್ಡ್ ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿರುವ ಸಚಿವರು ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತಿದ್ದಾರೆ. ಸಾರ್ವಜನಿಕರು ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಚಿವರ ಆಪ್ತ ಸಹಾಯಕ ಲಕ್ಷ್ಮೀಕಾಂತ ಗೌಡ ಸರ್ಕಾರದಿಂದ ಹಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಮತ್ತು ಮಂಜೂರಾದ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ಮಂಡಿಸಿದರು. ಗ್ರಾಪಂ ಅಧ್ಯಕ್ಷ ವೆಂಕಟೇಶ ಗೌಡ, ಉಪಾಧ್ಯಕ್ಷೆ ಸುನೀತಾ ಶೇಟ್, ಸದಸ್ಯರಾದ ಶ್ರೀಧರ ನಾಯ್ಕ ಹುಡಗೋಡ, ಮಾಜಿ ಜಿಪಂ ಸದಸ್ಯ ಕೃಷ್ಣ ಗೌಡ, ಚಂದ್ರಶೇಖರ ಗೌಡ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ರಾಜು ನಾಯ್ಕ ಮಂಕಿ, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.