ಗುಂಡ್ಲುಪೇಟೆಯಿಂದ ಮೈಸೂರಿಗೆ ಹೋಗಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೇ ಕಾದುನಿಂತಿದ್ದರು. 
ಜಿಲ್ಲೆ

ಅತ್ತ ಜನಕಲ್ಯಾಣ, ಇತ್ತ ಬಸ್ ನಿಲ್ದಾಣ ಭಣಭಣ..!

ಗುಂಡ್ಲುಪೇಟೆ: ಹಾಸನದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶಕ್ಕೆ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್‌ಗಳನ್ನು ಬಳಸಿಕೊಂಡಿದ್ದರಿಂದ ಮೈಸೂರು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತೆರಳಲು ಪ್ರಯಾಣಿಕರು ತೀವ್ರ ಪರದಾಡಿದರು.

ಕಾಂಗ್ರೆಸ್ ಸಮಾವೇಶಕ್ಕೆ ಪಟ್ಟಣದ ಸಾರಿಗೆ ಘಟಕದ 98 ಬಸ್‌ಗಳನ್ನು ನಿಯೋಜಿಸಲಾಗಿತ್ತು. ಡಿಪೋದಲ್ಲಿರುವ 136(ಬಸ್) ಮಾರ್ಗಗಳ 98 ಬಸ್‌ಗಳ ಕೊರತೆಯುಂಟಾಗಿತ್ತು. ನಾನಾ ಗ್ರಾಮಗಳಲ್ಲಿ ತಂಗುತ್ತಿದ್ದ ಬಸ್‌ಗಳನ್ನು ಬುಧವಾರ ರಾತ್ರಿಯೇ ಡಿಪೋಗೆ ವಾಪಸ್ ಕರೆಸಿಕೊಂಡಿದ್ದರಿಂದ ತಮ್ಮ ಕೆಲಸಕಾರ್ಯಗಳಿಗೆ ಪಟ್ಟಣಕ್ಕೆ ಹೋಗಬೇಕಾಗಿದ್ದ ಪ್ರಯಾಣಿಕರು ಬಸ್‌ಗಳು ಇಲ್ಲದೆ ಪರದಾಡಿದರು. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಕಾಲಾಕ್ಕೆ ಹೋಗಲಾಗಲಿಲ್ಲ.

ಬೆಳಗ್ಗೆ 7 ಗಂಟೆಯಿಂದಲೇ ಮೈಸೂರಿನತ್ತ ಹೋಗುವ ಬಸ್‌ಗಳಿಗಾಗಿ ಪ್ರಯಾಣಿಕರು ಕಾದು ನಿಂತಿದ್ದರು. ಗಂಟೆಗೋ, ಎರಡು ಗಂಟೆಗೋ ಬರುತ್ತಿದ್ದ ಬಸ್ ಹತ್ತಲು ಪ್ರಯಾಣಿಕರು ಹರಸಾಹಸಪಟ್ಟರು. ಮದುವೆ, ಶುಭ ಸಮಾರಂಭಗಳು, ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಗಂಟೆಗಟ್ಟಲೇ ಕಾದು ನಿಂತು ಬೇಸತ್ತರು. ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣ, ಜಿಲ್ಲಾ ಕೇಂದ್ರ ಹಾಗೂ ಮೈಸೂರಿಗೆ ತೆರಳುವ ಪ್ರಯಾಣಿಕರು ಖಾಸಗಿ ಬಸ್, ಆಟೋ, ಟೆಂಪೋಗಳ ಮೊರೆಹೋದರು.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್‌ಗಳನ್ನು ಹತ್ತುವುದೇ ಕಷ್ಟವಾಗಿದ್ದು, ಪ್ರತಿ ದಿನವೂ ಸಕಾಲದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ. ಈಗಾಗಲೇ ಸಾರಿಗೆ ಸಂಸ್ಥೆ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಇದರ ಜತೆಗೆ ಡಿಪೋದಲ್ಲಿ ಇರುವ 136ರಲ್ಲಿ 98 ಬಸ್‌ಗಳನ್ನು ಸಮಾವೇಶಕ್ಕೆ ಕಳಿಸಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಯ ಸೂಚನೆಯಂತೆ 98 ಬಸ್‌ಗಳನ್ನು ಸಮಾವೇಶಕ್ಕೆ ಬಾಡಿಗೆಗೆ ಕಳಿಸಲಾಗಿದೆ. ಕೆಲವು ಬಸ್‌ಗಳನ್ನು ನಿಯೋಜಿಸಿ ಮೈಸೂರಿನತ್ತ ಹೋಗುವ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಡಿಪೋ ಮ್ಯಾನೇಜರ್ ತ್ಯಾಗರಾಜು ವಿಜಯವಾಣಿಗೆ ತಿಳಿಸಿದರು.