ಗೊಳಸಂಗಿ 6ನೇ ವಾರ್ಡ್‌ನ ಇಂದಿರಾನಗರ ಗಡಿಭಾಗದ ಜನತೆ ನೀರಿನ ಸಮಸ್ಯೆ ಇತ್ಯರ್ಥಪಡಿಸುವಂತೆ ಗ್ರಾಪಂ ಅಧ್ಯಕ್ಷ ಕೇಶವ ಪವಾರ ಅವರಿಗೆ ಮನವಿ ಸಲ್ಲಿಸಿದರು. ಚನ್ನಪ್ಪ ಅಚನೂರ, ನಬಿರಸೂಲ ಸಂಗಾಪುರ ಮತ್ತಿತರರು ಇದ್ದರು. 
ಜಿಲ್ಲೆ

10 ವರ್ಷದಿಂದ ನೀರು ಹೊತ್ತು ತರೋದು ತಪ್ಪಿಲ್ಲ

Vijayapura - Desk - Parashuram Keri

ಗೊಳಸಂಗಿ: ಸ್ಥಳೀಯ 6ನೇ ವಾರ್ಡ್‌ನ ಇಂದಿರಾ ನಗರದ ಕೊನೆಯ ಬೀದಿ ಜನತೆಗೆ ಹತ್ತು ವರ್ಷ ಗತಿಸಿದರೂ ಬಳಕೆ ನೀರನ್ನೂ ಹೊತ್ತು ತರುವ ತಾಪತ್ರಯ ಇದುವರೆಗೂ ತಪ್ಪಿಲ್ಲ. ಈ ಕೂಡಲೇ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯ ನಿವಾಸಿಗರು ಶುಕ್ರವಾರ ಗ್ರಾಪಂ ಅಧ್ಯಕ್ಷರಿಗೆ ಒತ್ತಾಯಿಸಿದರು.

ಈ ಕುರಿತು ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ಸ್ಥಳೀಯ ನಿವಾಸಿಗರಾದ ಮಂಜುನಾಥ ಯಾದವ, ಮಹಾಂತೇಶ ಮೇಲಿನಮನಿ, ಸುಭದ್ರವ್ವ ಹೊಸಮನಿ, ಫಕೀರವ್ವ ಭಜಂತ್ರಿ ಮತ್ತಿತರರು ಮಾತನಾಡಿ, ಊರಿಗೆ ನೀರು ಸರಬರಾಜು ಮಾಡುವ 50 ಸಾವಿರ, ಒಂದು ಲಕ್ಷ, ಎರಡು ಲಕ್ಷ ಸೇರಿದಂತೆ 3,50,000 ಲೀಟರ್ ಸಾಮರ್ಥ್ಯವಿರುವ ಮೂರು ನೀರಿನ ಟಾಕಿಗಳ ಪಕ್ಕದಲ್ಲೇ ನಾವು ವಾಸಿಸುತ್ತಿದ್ದರೂ ನಮಗೆ ನೀರಿನ ಬರ ತಪ್ಪಿಲ್ಲ. ಹಲವು ವರ್ಷಗಳಿಂದ ಸಂಬಂಧಿಸಿದ ಗ್ರಾಪಂ ಸದಸ್ಯರು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ನಮ್ಮ ಅಳಲು ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ನೀರಿನ ಬವಣೆಗೆ ಇತಿಶ್ರೀ ಹಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಕೇಶವ ಪವಾರ ಶೀಘ್ರದಲ್ಲೇ ಜಲಜೀವನ ಮಿಷನ್ ಯೋಜನೆ ಕಾರ್ಯಾರಂಭ ಮಾಡಲಿದ್ದು ಆ ವೇಳೆ ಮೊದಲ ಆದ್ಯತೆ ನಿಮ್ಮ ಬೀದಿಗೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳೀಯ ನಿವಾಸಿಗರಾದ ಕಾಶೀಮ ಮನಗೂಳಿ, ಅಶೋಕ ಬೈರವಾಡಗಿ, ಮಲ್ಲಿಕಾರ್ಜುನ ಹಚಡದ, ಪರಸಪ್ಪ ಕೋಲಕಾರ, ಬಸವರಾಜ ಹೆಳವರ, ಗಂಗಮ್ಮ ಬೇನಾಳ ಮತ್ತಿತರರು ಇದ್ದರು.