ಶಿವಮೊಗ್ಗ: ರಂಗಭೂಮಿ ಎನ್ನುವುದು ತಾಯಿ. ಅದರ ಹಿಂದೆ ಹೋದವರು ಸೋಲಿಲ್ಲದ ಸರದಾರರು. ರಂಗಭೂಮಿಗಿಂತ ಮಿಗಿಲಾದುದು ಮತ್ತೊಂದಿಲ್ಲ ಎಂದು ಹಿರಿಯ ನಟ, ರಂಗಭೂಮಿ ಕಲಾವಿದ ದೊಡ್ಡಣ್ಣ ಹೇಳಿದರು.
ನಗರದ ಎನ್‌ಇಎಸ್‌ನ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಶಿವಮೊಗ್ಗ ಬಹುಮುಖಿಯಿಂದ ಆಯೋಜಿಸಿದ್ದ ‘ನನ್ನ ರಂಗಭೂಮಿ ಹಾಗೂ ಸಿನಿಮಾ ಪಯಣ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ನನ್ನಂತವರಿಗೂ ಒಂದು ಕಾಲ ಬರುತ್ತದೆ ಎಂದರೆ ಅದಕ್ಕೆ ಕಾರಣ ರಂಗಭೂಮಿ ಎಂದರು. ರಂಗಭೂಮಿ ಎಲ್ಲವನ್ನೂ ಕಲಿಸುತ್ತದೆ. ರಂಗಭೂಮಿ ಬರೀ ಬಣ್ಣ ಹಚ್ಚುವುದಲ್ಲ. ಅದು ಬದುಕು. ಜೀವನ ರೂಪಿಸುತ್ತದೆ. ರಂಗಭೂಮಿಗೆ ಬಂದವರು ಮತ್ತೆ ಹಿಂದಿರುಗಿ ನೋಡುವುದೇ ಇಲ್ಲ. ವರನಟ ಡಾ. ರಾಜ್‌ಕುಮಾರ್ ಕೂಡ ರಂಗಭೂಮಿಯಿಂದ ಬಂದವರು ಎಂಬುದು ವಿಶೇಷ. ರಂಗಭೂಮಿ ಜೀವನದ ದಿಕ್ಕು ಬದಲಿಸಿದೆ ಎಂದು ಹೇಳಿದರು. ಜ್ಞಾನ ಯಾರಪ್ಪನ ಮನೆ ಸ್ವತ್ತಲ್ಲ. ಭಾಷೆ ಶುದ್ಧವಾಗಿದ್ದಷ್ಟು ಜನ ಗೌರವಿಸುತ್ತಾರೆ. ಮಂಜುಳಾ, ಜಯಕ್ಕ, ಮನ್ಸೂರ್ ಸುಭದ್ರಮ್ಮ, ಎಂ.ಪಿ.ಶಂಕರ್ ಸೇರಿ ಅನೇಕ ದಿಗ್ಗಜರನ್ನು ನೋಡುವ ಅವಕಾಶ ನನಗೆ ರಂಗಭೂಮಿಯಿಂದ ಸಿಕ್ಕಿತು. ಜೀವನದಲ್ಲಿ ಮಾಡುವ ಕೆಲಸದಲ್ಲಿ ಅಹಂಕಾರ ಇರಬೇಕು. ಆದರೆ ದುರಂಹಕಾರ ಇರಬಾರದು. ಅದು ಅಣ್ಣಾವ್ರ ರಾಜಣ್ಣ ಅವರಿಂದ ನೋಡಿ ಕಲಿತಿದ್ದೆ ಎಂದರು. ಹಸಿವು, ನಿದ್ದೆ, ಸಾವು ಯಾರನ್ನೂ ಬಿಡಲ್ಲ ಎಂದು ರಾಜಕುಮಾರ್ ಹೇಳಿದ್ದರು. ಮನುಷ್ಯ ಹೇಗೇಗೊ ಬದುಕುವುದಲ್ಲ. ಒಳ್ಳೆಯ ಗುರುಗಳು, ಅಣ್ಣ-ತಮ್ಮಂದಿರು, ಸ್ನೇಹಿತರು ಸಿಗಬೇಕಾದರೆ ಪುಣ್ಯ ಪಡೆದಿರಬೇಕು. ಅಷ್ಟೇ ಏಕೆ ಒಳ್ಳೆಯ ಪತ್ನಿ ಪಡೆಯಲೂ ಪುಣ್ಯಬೇಕು ಎಂದು ಸಭಿಕರನ್ನು ನಗೆಗಡಲ್ಲಿ ತೇಲಿಸಿದರು. ಎಎಸ್‌ಪಿ ಅನಿಲ್ಕುಮಾರ್ ಭೂಮರಡ್ಡಿ, ಬಹುಮುಖಿಯ ಪ್ರಮುಖರಾದ ವೈದ್ಯನಾಥ, ಕಾಂತೇಶ್ ಕದರಮಂಡಲಗಿ, ಡಾ. ನಾಗಭೂಷಣ್, ಡಾ. ಕೆ.ಎಸ್.ಶ್ರೀಧರ್, ಚನ್ನವೀರಪ್ಪ ಗಾಮನಗಟ್ಟಿ, ಡಾ. ಸಂಧ್ಯಾ ಕಾವೇರಿ ಇತರರಿದ್ದರು.
ಕನ್ನಡಕ್ಕಿರುವ ತಾಕತ್ತು ಇಂಗ್ಲಿಷ್‌ಗೆ ಇಲ್ಲ. ಆಂಗ್ಲರ ಆಡಳಿತದಲ್ಲಿ ಕನ್ನಡ ತುಂಬ ಸುಭಿಕ್ಷವಾಗಿತ್ತು. ಪುಸ್ತಕಗಳನ್ನು ಓದುವುದರಿಂದ ಮಾತ್ರ ಜ್ಞಾನರ್ಜನೆ ಆಗುತ್ತದೆ. ಪುಸ್ತಕ ಓದಿದರೆ ಮಸ್ತಕದಲ್ಲಿ ಇರುತ್ತದೆ. ಜಗತ್ತಿನ ಮೂರು ಸರ್ವ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ವ್ಯಾಕರಣ ಬದ್ಧ, ಸುಲಿಲಿತ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡ ಮಾತ್ರ. ಕನ್ನಡದಲ್ಲಿ ಒಂದು ಪದಕ್ಕೆ 22 ಪಾರಿಭಾಷಿಕ ಅರ್ಥಗಳು ಸಿಗುತ್ತವೆ. -ದೊಡ್ಡಣ್ಣ, ಹಿರಿಯ ನಟ