ಕುಶಾಲನಗರ:
ಜಿಲ್ಲೆಯಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಖ್ಯಾತಿಯ ಕುಶಾಲನಗರ ರಿಯಲ್ ಎಸ್ಟೇಟ್ ಲಾಬಿಯಿಂದಾಗಿ ಪ್ರವಾಹಪೀಡಿತ ಪ್ರದೇಶವಾಗಿ ಬದಲಾಗಿದೆ. ಬಫರ್ ಝೋನ್‌ಗಳಲ್ಲೂ ತಲೆ ಎತ್ತಿರುವ ಬಡಾವಣೆಗಳ ನಿವಾಸಿಗಳಿಗೆ ಪ್ರತಿ ಮಳೆಗಾಲವೂ ಪುನರ್ಜನ್ಮ ಇದ್ದಂತೆ ಆಗಿಬಿಟ್ಟಿದೆ. ಆದರೂ ನೀರು ಬರುವ ಪ್ರದೇಶದಲ್ಲಿ ನಡೆಯುವ ನಿರ್ಮಾಣ ಕಾಮಗಾರಿಗಳಿಗೆ ಈತನಕ ಯಾವುದೇ ಕಡಿವಾಣ ಬಿದ್ದಿಲ್ಲ.
ಜೀವನದಿ ಕಾವೇರಿ ಕುಶಾಲನಗರದಲ್ಲಿ ಪಟ್ಟಣದ ಮೂರು ಭಾಗಗಳಲ್ಲಿ ಸುತ್ತುವರಿದು ಹರಿಯುವುದರಿಂದ ನದಿ ತೀರದ ಬಡಾವಣೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವುದು ಸಾಮಾನ್ಯ. ಆದರೂ ಇಂಥ ಪ್ರದೇಶದಲ್ಲೇ ವರ್ಷದಿಂದ ವರ್ಷಕ್ಕೆ ಮನೆಗಳು, ವಾಣಿಜ್ಯ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಡುವ ಎಂಜಿನಿಯರಿAಗ್ ಕಾಲೇಜಿನಿಂದ ಮುಳ್ಳುಸೋಗೆ ತನಕ ವ್ಯಾಪಿಸಿರುವ ಯೋಗಾನಂದ ಬಡಾವಣೆ, ಇಂದಿರಾ ಬಡಾವಣೆ, ಅಯ್ಯಪ್ಪಸ್ವಾಮಿ ದೇವಾಲಯ, ದಂಡಿನಪೇಟೆ, ಎಪಿಎಂಸಿ, ಸಿಂಗಾರಮ್ಮ ಬಡಾವಣೆ, ಶೈಲಜಾ ಬಡಾವಣೆ, ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ಮಾರುಕಟ್ಟೆ, ಆದಿಶಂಕರಾಚಾರ್ಯ ಬಡಾವಣೆ, ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಬಿದ್ದಪ್ಪ ಲೇಔಟ್ ಹೀಗೆ ಕುಶಾಲನಗರದಲ್ಲಿ ನದಿ ತೀರದ ಉದ್ದಕ್ಕೂ 12ಕ್ಕೂ ಹೆಚ್ಚು ಬಡಾವಣೆಗಳು, 200ಕ್ಕೂ ಅಧಿಕ ಮನೆಗಳು ಹಾಗೂ ಸುಮಾರು ಸಾವಿರಕ್ಕೂ ಅಧಿಕ ಮಂದಿ ಪ್ರತಿ ವರ್ಷ ತೊಂದರೆಗೆ ಒಳಗಾಗುತ್ತಲೇ ಇರುತ್ತಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ಲಾಭಕ್ಕಾಗಿ ನದಿ ಪಾತ್ರದಲ್ಲಿ ಲೇಔಟ್‌ಗಳನ್ನು ನಿರ್ಮಾಣ ಮಾಡಿ ಮಧ್ಯಮ ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕೆಲವು ಮಧ್ಯವರ್ತಿಗಳು, ಧನದಾಹಿ ಅಧಿಕಾರಿಗಳ ಕೂಟ ಈ ವಿಷ ವರ್ತುಲದಲ್ಲಿ ಅಮಾಯಕರನ್ನು ಸಿಲುಕಿಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿಬರುತ್ತಿದೆ.
ಭೂಮಿಗೆ ಅಧಿಕ ಬೇಡಿಕೆ ಇರುವ ಕುಶಾಲನಗರದಲ್ಲಿ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಸೈಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಕೊನೆಗೆ ಪ್ರವಾಹದಂಥ ಪರಿಸ್ಥಿತಿ ನಿರ್ಮಾಣ ಆದಾಗ ಈ ಮಧ್ಯವರ್ತಿ, ಅಧಿಕಾರಿಗಳ ಕೂಟ ಜನಪ್ರತಿನಿಧಿಗಳನ್ನು, ಹಿರಿಯ ಅಧಿಕಾರಿಗಳನ್ನು ಇಲ್ಲಿಗೆ ಭೇಟಿ ನೀಡುವಂತೆ ಮಾಡಿ ಪರಿಹಾರದ ಭರವಸೆ ಕೊಡಿಸುವಲ್ಲೂ ಯಶಸ್ವಿ ಆಗುತ್ತಿದ್ದಾರೆ.
2018ರ ಪ್ರವಾಹ ಸಂದರ್ಭದಲ್ಲಿ ಕಾವೇರಿ ನದಿ ತನ್ನ ಗಡಿ ಗುರುತಿಸಿ ಹೋಗಿತ್ತು. 2019ರಲ್ಲೂ ಪ್ರವಾಹ ಮರುಕಳಿಸಿತು. ಈ ಸಂದರ್ಭದಲ್ಲೂ ನದಿ ತನ್ನ ಸರಹದ್ದಿನ ಸೂಚನೆ ಕೊಟ್ಟಿತ್ತು. ನಂತರ 2020ರಲ್ಲಿ ಇದೇ ಪರಿಸ್ಥಿತಿ ಪುನರಾವರ್ತನೆ ಆಯಿತು. ಆದರೂ ಎಚ್ಚೆತ್ತುಕೊಳ್ಳಬೇಕಾದವರು ಎಚ್ಚೆತ್ತುಕೊಳ್ಳಲೇ ಇಲ್ಲ. ನಂತರದ ದಿನಗಳಲ್ಲೂ ಈ ಬಡಾವಣೆಗಳು ಕ್ರಿಯಾಶೀಲವಾದವು. ಪ್ರವಾಹ ಬಂದು ಹೋದರೂ ಬುದ್ಧಿ ಕಲಿಯದವರು ಖಾಲಿ ಬಿದ್ದಿದ್ದ ಸೈಟ್‌ಗಳಲ್ಲಿ ಮನೆ ಕಟ್ಟಿಸಿದರು. ಮತ್ತೆ ಕೆಲವರು ಸೈಟ್‌ಗಳನ್ನು ಮಾರಿದರು. ಮನೆಗಳ ಮಾರಾಟವೂ ನಡೆಯಿತು. ಪೆಟ್ರೋಲ್ ಬಂಕ್ ರೀತಿಯ ವಾಣಿಜ್ಯ ನಿರ್ಮಾಣಗಳೂ ತಲೆ ಎತ್ತಿದವು. ಈಗಲೂ ಇಂಥ ಜಾಗದಲ್ಲಿ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿರುವುದು ಕಾಣಬಹುದು.
ಮತ್ತೊಂದು ಕಡೆ ನದಿ ಪಾತ್ರದ ಬಡಾವಣೆಗಳ ನಿವಾಸಿಗಳು ಪ್ರತಿ ಮಳೆಗಾಲದಲ್ಲೂ ಆತಂಕದಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಮಳೆಗಾಲ ಬಂತು ಎಂದರೆ ತಮ್ಮ ಮನೆ ನದಿ ನೀರಿನಲ್ಲಿ ಮುಳುಗುವ ಭೀತಿಯಿಂದ ಮನೆಯ ಸಂಪೂರ್ಣ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಮಯ, ಹಣ, ನೆಮ್ಮದಿಯನ್ನು ವ್ಯಯಿಸಬೇಕಿದೆ.
2018ಕ್ಕಿಂತಲೂ ಮೊದಲು ನದಿ ತೀರದಲ್ಲಿ ಸೈಟ್ ಖರೀದಿಸಿದವರು, ಮನೆ ಕಟ್ಟಿಸಿಕೊಂಡವರು, ಭೂಮಿ ಮೇಲೆ ಹೂಡಿಕೆ ಮಾಡಿದವರರಿಗೆ ಅರಿವಿನ ಕೊರತೆ ಇತ್ತು ಎನ್ನುವ ಕಾರಣಕ್ಕೆ ಅವರು ಅನುಕಂಪಕ್ಕೆ ಅರ್ಹರು ಎಂದು ಪರಿಗಣಿಸಬಹುದಾದರೂ ಮಳೆಗಾಲದಲ್ಲಿ ಪ್ರವಾಹದ ನೀರು ಬರುತ್ತದೆ ಎಂದು ಗೊತ್ತಿದ್ದೂ ಅಲ್ಲಿ ಸೈಟ್ ಖರೀದಿ, ಬೃಹತ್ ನಿರ್ಮಾಣಗಳಂಥ ಚಟುವಟಿಕೆ ನಡೆಸಿದವರನ್ನೂ ಈ ಗುಂಪಿಗೆ ಸೇರಿಸಬಹುದಾ ? ಎನ್ನುವುದು ಸದ್ಯದ ಪ್ರಶ್ನೆ.
ಅನಾಹುತದ ಎಲ್ಲಾ ಸಾಧ್ಯತೆಯ ಅರಿವಿದ್ದು ಬಫರ್ ಝೋನ್‌ಗಳಲ್ಲಿ ಹಣ ಹಾಕಿ ಭೂಮಿ ಖರೀದಿಸಿ ಮನೆ, ಕಟ್ಟಡ, ವಾಣಿಜ್ಯ ಉದ್ದೇಶಕ್ಕೆ ಹೂಡಿಕೆ ಮಾಡಿದ ಹೂಡಿಕೆದಾರರು, ಮಳೆಗಾಲದಲ್ಲಿ ಇಲ್ಲಿ ಉಂಟಾಗುವ ಪ್ರವಾಹದ ಬಗ್ಗೆ ಮಾಹಿತಿ ಇದ್ದು ನಿರ್ಮಾಣ ಕಾಮಗಾರಿಗಳಿಗೆ ನಿರಕ್ಷೇಪಣಾ ಪತ್ರ ಕೊಟ್ಟ ಅಧಿಕಾರಿಗಳು, ಯೋಜನೆಗಳಿಗೆ ಒಪ್ಪಿಗೆಯ ಮುದ್ರೆ ಒತ್ತಿದ ಅಧಿಕಾರಿಗಳು, ಕಾಮಗಾರಿ ನಡೆಸಲು ಅನುಮತಿ ಕೊಟ್ಟ ಅಧಿಕಾರಿಗಳು ಎಲ್ಲರೂ ತಪ್ಪ ಮಾಡಿದವರೇ ಆಗಿರುವಾಗ ಇವರಿಗೆಲ್ಲಾ ಶಿಕ್ಷೆಯ ಬದಲು ಸರ್ಕಾರದಿಂದ ಪರಿಹಾರ ಕೊಡಿಸವುದು ಎಷ್ಟು ಸರಿ ? ಎನ್ನುವ ಚರ್ಚೆಗಳೂ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
2023ರಲ್ಲಿ ಕುವೆಂಪು ಬಡಾವಣೆಗೆ ಪ್ರವಾಹ ಬಾರದಂತೆ ತಡೆಗೋಡೆ ನಿರ್ಮಾಣ ಮಾಡಿರುವುದು ಬಹುತೇಕ ಯಶಸ್ವಿಯಾಗಿದೆ. ಈ ವರ್ಷದ ಮಳೆಗಾಲದಲ್ಲಿ ಪ್ರವಾಹ ಬಾರದೆ ಅ ಬಡಾವಣೆ ನಿವಾಸಿಗಳು ನೆಮ್ಮದಿಯ ನಿಟ್ಟುಸಿಸಿರು ಬಿಟ್ಟಿದ್ದಾರೆ. ಇದೇ ಮಾದರಿಯಲ್ಲಿ ಕಾವೇರಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲು ಸ್ಥಳೀಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸ್ಪಂದಿಸುವ ಭರವಸೆ ನೀಡಿದ್ದಾರೆ.
2018 ಮತ್ತು 2019 ರಲ್ಲಿ ಕೊಡಗು ಜಿಲ್ಲೆಯಾದ್ಯಂತ ವಿಪರೀತ ಮಳೆಯಾದ ಕಾರಣ ಹಾರಂಗಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿ ಹೊರಹರಿವು ಹೆಚ್ಚಿಸಿದ ಸಂದರ್ಭದಲ್ಲೇ ಕಾವೇರಿ ನದಿಯಲ್ಲೂ ನೀರಿನ ಹರಿವು ಪ್ರಮಾಣ ಹೆಚ್ಚಾಗಿತ್ತು. ಹಾರಂಗಿ ನೀರು ಕಾವೇರಿ ನದಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ 200 ಅಧಿಕ ಮನೆಗಳು ಮುಳುಗಡೆಯಾಗಿದ್ದವು. ಕಳೆದ 4 ವರ್ಷಗಳಿಂದ ಜಲಾಶಯ ಭರ್ತಿಯಾಗುವುದನ್ನು ಕಾಯದೆ ಒಳ ಹರಿವು ನೋಡಿಕೊಂಡು ನೀರು ಬಿಡುಗಡೆ ಮಾಡುತ್ತಿದ್ದಾರೆ. ಜಲಾಶಯದಲ್ಲಿ ಕನಿಷ್ಠ 8 ರಿಂದ 10 ಅಡಿ ಬಾಕಿ ಉಳಿಸಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ.
ಕಾವೇರಿ ನೀರಾವರಿ ನಿಗಮದಿಂದ ಈಗಾಗಲೇ ಕುವೆಂಪು ಬಡಾವಣೆಯಲ್ಲಿ ನದಿ ಪ್ರವಾಹ ತಡೆಗಟ್ಟಲು ತಡೆಗೋಡೆ ನಿರ್ಮಾಣ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ನದಿ ಪಾತ್ರದಲ್ಲಿ ಈ ರೀತಿಯ ತಡೆಗೋಡೆ ನಿರ್ಮಾಣ ಮಾಡಲು ಯೋಜನೆ ರೂಪಿಸಿ ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾರಂಗಿ ಜಲಾಶಯದಿಂದ ಈ ಬಾರಿ ಉತ್ತಮವಾಗಿ ನಿರ್ವಹಣೆ ಮಾಡಿ, ಜನರ ಆತಂಕ ದೂರಾಗಿಸುವಲ್ಲಿ ಸಫಲರಾಗಿದ್ದಾರೆ. ಇದೆ ಪ್ರಯೋಗ ಮುಂದಿನ ಮಳೆಗಾಲದಲ್ಲೂ ಅಳವಡಿಸಿಕೊಳ್ಳಲಾಗುವುದು.
ಡಾ. ಮಂತರ್ ಗೌಡ, ಶಾಸಕ, ಮಡಿಕೇರಿ