ಮಡಿಕೇರಿ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭಾಗಮಂಡಲದಲ್ಲಿ ಉತ್ತಮವಾದ ಬಸ್ ತಂಗುದಾಣ ಇದ್ದರೂ ಇದರಿಂದ ಪ್ರಯಾಣಿಕರಿಗೆ ಪ್ರಯೋಜನ ಆಗುತ್ತಿಲ್ಲ. ಬಸ್‌ಗಳನ್ನು ಚಾಲಕರು ತಮಗೆ ಇಷ್ಟ ಬಂದಲ್ಲಿ ನಿಲ್ಲಿಸುತ್ತಿದ್ದು, ಇದರಿಂದ ಸುಗಮ ಸಂಚಾರಿ ವ್ಯವಸ್ಥೆಗೆ ಸಮಸ್ಯೆ ಆಗುತ್ತಿದೆ. ಬಸ್‌ಗಳಿಗೆ ಕಾಯುವ ಸಂದರ್ಭ ಪ್ರಯಾಣಿಕರು ಬಿಸಿಲು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿಮುಂಗಟ್ಟುಗಳನ್ನು ಆಶ್ರಯಿಸುವ ಅನಿವಾರ್ಯತೆಯಿದೆ.
ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮ ಕ್ಷೇತ್ರವಾಗಿರುವ ಭಾಗಮಂಡಲ ದಕ್ಷಿಣ ಕಾಶಿ ಎಂದು ಕೂಡ ಕರೆಯಲ್ಪಡುತ್ತದೆ. ಪ್ರತಿದಿನವೂ ಇಲ್ಲಿಗೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕಾವೇರಿ ತುಲಾಸಂಕ್ರಮಣ ಜಾತ್ರೆಯ ಒಂದು ತಿಂಗಳ ಅವಧಿಯಲ್ಲಿ ಸಾಮಾನ್ಯಕ್ಕಿಂದ ಎರಡು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕೊಡಗಿನ ದೊಡ್ಡ ಹೋಬಳಿ ಕೇಂದ್ರಗಳಲ್ಲಿ ಭಾಗಮಂಡಲವೂ ಒಂದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹೋಬಳಿ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು ಇಲ್ಲಿದ್ದು, ದಿನಂಪ್ರತಿ ಜನರ ಓಡಾಟ ಇರುತ್ತದೆ. ಅದರಲ್ಲೂ ವಾರದ ಸಂತೆಯ ದಿನವಾದ ಸೋಮವಾರ ಹೆಚ್ಚಿನ ಜನಸಂದಣಿ ಕಂಡುಬರುತ್ತದೆ. ಇವರಿಗೆಲ್ಲಾ ಉಪಯೋಗ ಆಗಲಿ ಎಂದು ಇಲ್ಲೊಂದು ಬಸ್ ತಂಗುದಾಣ ನಿರ್ಮಿಸಿದ್ದರೂ ಇದರಿಂದ ಪ್ರಯಾಣಿಕರಿಗೆ ಪ್ರಯೋಜನ ಇಲ್ಲದಂತಾಗಿದೆ.
ಭಾಗಮಂಡಲ ಭಗಂಡೇಶ್ವ ದೇವಾಲಯ ಹಿಂಭಾಗದಲ್ಲಿ ಪೇಟೆಯ ಪ್ರಮುಖ ಸ್ಥಳದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ೨ ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಿಸಲಾಗಿದೆ. ಕಾಲ ಕಾಲಕ್ಕೆ ಸುಣ್ಣ. ಬಣ್ಣ ಹೊಡೆದು ಈ ಬಸ್ ತಂಗುದಾಣವನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಲಾಗಿದೆ. ಆದರೆ ಬಸ್‌ಗಳು ಮಾತ್ರ ಇಲ್ಲಿ ಬಂದು ನಿಲ್ಲುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಚಾಲಕರಿಗೆ ಸೂಚಿಸಿದರೂ ಬಹುತೇಕ್ ಬಸ್‌ಗಳನ್ನು ನಾಪೋಕ್ಲು ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದೆ. ದೇವಾಲಯ ಬಳಿ, ಚಾಮುಂಡಿ ಮೈದಾನ ಹತ್ತಿರವೂ ನಿಲ್ಲಿಸುವುದಿದೆ. ಇದರಿಂದ ಸಮಸ್ಯೆ ಆಗುವುದು ಮಾತ್ರ ಪ್ರಯಾಣಿಕರಿಗೆ.
ಮೇಲ್ಸೇತುವೆ ಇರುವುದರಿಂದ ಬಸ್ ತಂಗುದಾಣ ಬಳಿ ಬಸ್‌ಗಳನ್ನು ತಿರುಗಿಸಲು ಆಗುವುದಿಲ್ಲ. ಹಾಗಾಗಿ ಬಸ್‌ಗಳನ್ನು ಮಾರುಕಟ್ಟೆ ತನಕ ತೆಗೆದುಕೊಂಡು ಹೋಗಿ ತಿರುಗಿಸಿ ತರಬೇಕಾಗುತ್ತದೆ. ಇದೊಂದೇ ಕಾರಣಕ್ಕೆ ಬಸ್ ತಂಗುದಾಣದಲ್ಲಿ ಬಸ್‌ಗಳನ್ನು ನಿಲ್ಲಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಚಾಲಕರ ಈ ವರ್ತನೆಯಿಂದ ಸಾಮಾನ್ಯ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುವ ಸಂದರ್ಭ ತೊಂದರೆ ಅನುಭವಿಸಬೇಕಾಗಿದೆ. ತಾವು ಹೋಗಬೇಕಿರುವ ಸ್ಥಳಗಳಿಗೆ ತೆರಳುವ ಬಸ್‌ಗಳಿಗೆ ಕಾಯುವ ಸಂದರ್ಭ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಅಂಗಡಿ-ಮುಂಗಟ್ಟುಗಳ ಕೆಳಗೆ ಆಶ್ರಯ ಪಡೆಯುವ ಅನಿವಾರ್ಯತೆ ಪ್ರಯಾಣಿಕರದ್ದಾಗಿದೆ.
ಎಲ್ಲೆಂದರಲ್ಲಿ ಬಸ್‌ಗಳು ನಿಲ್ಲುವುದರಿಂದ ಇತರ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಭಾಗಮಂಡಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಾರೆ. ಈ ವೇಳೆ ವಾಹನಗಳ ದಟ್ಟಣೆ ಇಲ್ಲಿ ಸಾಮಾನ್ಯವಾಗಿರುತ್ತದೆ. ಭಾಗಮಂಡಲಕ್ಕೆ ಪ್ರತಿದಿನವೂ ಕೆಎಸ್‌ಆರ್‌ಟಿಸಿ ಸೇರಿದಂತೆ ೨೦ಕ್ಕೂ ಹೆಚ್ಚು ಬಸ್‌ಗಳು ಬರುತ್ತವೆ. ಬಸ್ ತಂಗುದಾಣದಲ್ಲಿ ಒಮ್ಮೆಲೆ ಗರಿಷ್ಠ ೩ ಬಸ್‌ಗಳನ್ನು ನಿಲ್ಲಿಸಿಕೊಳ್ಳಲು ಅವಕಾಶ ಇದೆ. ಹೊರಡುವ ಅರ್ಧಗಂಟೆ ಮೊದಲು ಬಸ್‌ಗಳನ್ನು ತಂಗುದಾಣಕ್ಕೆ ತಂದು ಉಳಿದ ಬಸ್‌ಗಳನ್ನು ಮೈದಾನದಲ್ಲಿ ನಿಲ್ಲಿಸಿಕೊಳ್ಳಬಹುದಾಗಿದೆ. ಇದರಿಂದ ಪ್ರಯಾಣಿಕರು ಮತ್ತು ಇತರ ವಾಹನಗಳಿಗೆ ಅನುಕೂಲ ಆಗುತ್ತದೆ.
ಭಾಗಮಂಡಲದಲ್ಲಿ ಬಸ್ ತಂಗುದಾಣದಲ್ಲೇ ಬಸ್‌ಗಳನ್ನು ನಿಲುಗಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಲವು ಬಾರಿ ಚಾಲಕರಿಗೆ ಸೂಚನೆ ನೀಡಲಾಗಿದೆ. ಆದರೂ ಪ್ರಯೋಜನ ಮಾತ್ರ ಶೂನ್ಯ. ಹಾಗಾಗಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾಗಮಂಡಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಬಸ್ ಮಾಲೀಕರಿಗೆ ನೊಟೀಸ್ ಕೊಡಲು ನಿರ್ಧರಿಸಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದನ್ನು ಸ್ಥಳೀಯರು ಕುತೂಹಲದಿಂದ ಕಾಯುತ್ತಿದ್ದಾರೆ.
ಭಾಗಮಂಡಲ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಾತ್ರವಲ್ಲ. ವಿಶಾಲ ವ್ಯಾಪ್ತಿ ಹೊಂದಿರುವ ಹೋಬಳಿ ಕೇಂದ್ರವೂ ಹೌದು. ಹಾಗಾಗಿ ಇಲ್ಲಿ ಪ್ರತಿನಿತ್ಯ ಜನರ ಓಡಾಟ ಇರುತ್ತದೆ. ಪ್ರಯಾಣಿಕರಿಗಾಗಿ ಬಸ್ ತಂಗುದಾಣ ಇದ್ದರೂ ಇದರ ಉಪಯೋಗ ಆಗುತ್ತಿಲ್ಲ. ಎಲ್ಲಾ ಬಸ್‌ಗಳು ಈ ತಂಗುದಾಣದಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಂತಾಗಬೇಕು.
ಶ್ರೀನಾಥ್ ನಾಯಕ್, ಭಾಗಮಂಡಲ ನಿವಾಸಿ
ಸಾವಿರಾರು ರೂ. ವೆಚ್ಚ ಮಾಡಿ ನಿರ್ಮಿಸಿರುವ ಈ ಬಸ್ ತಂಗುದಾಣವನ್ನು ಉಪಯೋಗಿಸದೇ ಬಿಟ್ಟರೆ ಪಾಳು ಬೀಳುವ ಸಾಧ್ಯತೆ ಇದೆ. ಈ ಮೂಲಕ ಸಾರ್ವಜನಿಕರ ಹಣ ಪೋಲು ಆದಂತಾಗುತ್ತದೆ. ಇದನ್ನು ತಪ್ಪಿಸಲು ಬಸ್ ತಂಗುದಾಣ ಸಾರ್ವಜನಿಕರ ಬಳಕೆಗೆ ಲಭ್ಯ ಆಗುವಂತೆ ಮಾಡಬೇಕು. ಇದರಿಂದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ.
ಶಬರೀಶ್ ಕುದುಕುಳಿ, ಭಾಗಮಂಡಲ ನಿವಾಸಿ
ಬಸ್ ತಂಗುದಾಣದಲ್ಲೇ ಬಸ್ ನಿಲ್ಲಿಸುವಂತೆ ಈ ಹಿಂದೆ ಹಲವು ಬಾರಿ ಚಾಲಕರಿಗೆ ಸೂಚಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇನ್ನು ಬಸ್ ಮಾಲೀಕರಿಗೆ ಈ ಬಗ್ಗೆ ನೊಟೀಸ್ ಕೊಟ್ಟು ಎಚ್ಚರಿಕೆ ಕೊಡಬೇಕಾಗುತ್ತದೆ. ಇನ್ನು ಮುಂದೆ ಪಂಚಾಯಿತಿ ಸಿಬ್ಬಂದಿ ಒಬ್ಬರನ್ನು ನಿಯೋಜಿಸಿ ಎಲ್ಲಾ ಬಸ್‌ಗಳನ್ನು ಬಸ್ ತಂಗುದಾಣದಲ್ಲೇ ನಿಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಕಾಳನ ರವಿ, ಅಧ್ಯಕ್ಷ, ಗ್ರಾಮ ಪಂಚಾಯಿತಿ, ಭಾಗಮಂಡಲ