ಸವಣೂರ: ಮನೆಗಿಂತ ಬೇರೊಂದು ವಿಶ್ವವಿದ್ಯಾಲಯ ಇಲ್ಲ. ಇಲ್ಲಿ ಮೈಗೂಡಿಸಿಕೊಳ್ಳುವ ಆರೋಗ್ಯಕರ ಜೀವನಶೈಲಿ, ಆಲೋಚನೆಗಳು ಇಡಿ ಬದುಕನ್ನೇ ಬೆಳಗುತ್ತವೆ ಎಂದು ಹಿರೇಮಣಕಟ್ಟಿ ಮುರುಘೇಂದ್ರ ಮಠದ ಶ್ರೀವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀರೇಣುಕಾಚಾರ್ಯ ಮಂದಿರ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಾದಪೂಜೆ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಶಹರ ಘಟಕದ ನೂತನ ಪದಾಧಿಕಾರಿಗಳ ಸೇವಾಧಿಕಾರ ಸ್ವೀಕಾರ ಸಮಾರಂಭ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಿಡುವಿಲ್ಲದ ಜೀವನ ಶೈಲಿಯ ನಡುವೆಯೂ ಮಕ್ಕಳಿಗಾಗಿ ಬಿಡುವು ಮಾಡಿಕೊಳ್ಳಬೇಕು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನಗಳು ನೈಜ ಜ್ಞಾನ ಸಂಪತ್ತು ಹೊಂದಿವೆ, ಅವುಗಳ ಸತತ ಅಧ್ಯಯನದಿಂದ ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗುತ್ತದೆ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ಪ್ರವೀಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಹರ ಘಟಕದ ಅಧ್ಯಕ್ಷರಾಗಿ ವಿದ್ಯಾಧರ ಕುತನಿ ನೂತನ ಪದಾಧಿಕಾರಿಗಳೊಂದಿಗೆ ಅಧಿಕಾರ ಸ್ವೀಕರಿಸಿದರು. 1ರಿಂದ 10ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ವಚನಗಳ ಕಂಠ ಪಾಠ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರೇಣುಕಾಚಾರ್ಯ ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ರಾಜು ಮಟಿಗಾರ, ಪ್ರಮುಖರಾದ ಆನಂದಯ್ಯ ಕಲ್ಮಠ, ಪ್ರಕಾಶ ಜಮಾದಾರ, ವಿಶ್ವನಾಥ ಹಾವಣಗಿ, ಸಿ.ಎನ್. ಲಕ್ಕನಗೌಡ್ರ, ಸಿ.ವಿ. ಗುತ್ತಲ, ರವತಪ್ಪ ಬಿಕ್ಕಣ್ಣನವರ, ಬಿ.ಎಸ್. ಚಳ್ಳಾಳ, ಈರಯ್ಯ ಹಿರೇಮಠ, ಗಣೇಶಗೌಡ ಪಾಟೀಲ, ಸುನಂದಾ ಚಿನ್ನಾಪೂರ, ಕವಿತಾ ಬಿಕ್ಕಣ್ಣನವರ, ಪುಷ್ಪಾ ಬತ್ತಿ, ಪೂರ್ಣಿಮಾ ಬೆಣ್ಣಿ, ಡಾ. ಸವಿತಾ ಮುರಡಿ ಹಾಗೂ ಇತರರು ಪಾಲ್ಗೊಂಡಿದ್ದರು.