ಜಿಲ್ಲೆ

ಇನ್ನೂ ಎರಡು ವಾರ ಸಾರ್ವಜನಿಕ ಸಾರಿಗೆ ಸೇವೆ ಇರಲ್ಲ

ತುಮಕೂರು: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಆರಂಭ ಇನ್ನೂ ಎರಡು ವಾರ ಮುಂದೂಡಿಕೆಯಾಗಿದೆ.

ಮೇ 4ರಿಂದ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ ಸಂಚಾರ ಆರಂಭಿಸಲು ರಾಜ್ಯ ಸಾರಿಗೆ ಸಂಸ್ಥೆ ತುಮಕೂರು ವಿಭಾಗ ಅಗತ್ಯ ಸಿದ್ಧತೆ ಮಾಡಿಕೊಂಡು ಸಿಬ್ಬಂದಿಗೆ ಬುಲಾವ್ ನೀಡಿತ್ತು. ಶನಿವಾರ ಏಕಾಏಕಿ ಎರಡು ಪಾಸಿಟಿವ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಜಾಗೃತವಾದ ಜಿಲ್ಲಾಡಳಿತ ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭಕ್ಕೆ ರೆಡ್ ಸಿಗ್ನಲ್ ನೀಡಿತು.

ಜಿಲ್ಲೆಯಲ್ಲಿ 612 ಬಸ್‌ಗಳು ಸಂಚರಿಸುತ್ತಿದ್ದು, 2006 ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆಯ ಪ್ರಮಾಣಪತ್ರದ ಜತೆ ಸೇವೆಗೆ ಹಾಜರಾಗುವಂತೆ ಬುಲಾವ್ ನೀಡಲಾಗಿತ್ತು. ರೆಡ್ ರೆನ್ ವಯಲದಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಕರೊನಾ ಟೆಸ್ಟ್ ಹಾಗೂ ಜಿಲ್ಲಾ ಕೇಂದ್ರ ಕಿತ್ತಳೆ ಹಾಗೂ ಇತರ ತಾಲೂಕುಗಳು ಹಸಿರು ವಲಯದಲ್ಲಿರುವವರು ವೈದ್ಯರಿಂದ ಪ್ರಮಾಣಪತ್ರ ಪಡೆದು ಹಾಜರಾಗಬೇಕಿತ್ತು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ತುಮಕೂರು ಹಾಗೂ ಬೆಂಗಳೂರಿನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ಸ್ವಗ್ರಾಮಗಳಿಗೆ ಕಳುಹಿಸುವ ಕಾರ್ಯಾಚರಣೆಗೆ ತಿಪಟೂರು, ಶಿರಾ, ತುಮಕೂರು ಘಟಕದ 32 ಬಸ್‌ಗಳನ್ನು ಕರೆಸಿಕೊಳ್ಳಲಾಗಿದೆ.

ಶುಚಿಯಾದ ಬಸ್‌ಗಳು: ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದ ಸಂದರ್ಭದಲ್ಲಿ ಬಸ್ ಸಂಚಾರ ಆರಂಭವಾಗುವ ವಿಶ್ವಾಸದಿಂದ ಎಲ್ಲ ಬಸ್‌ಗಳಿಗೂ ಡೀಸೆಲ್ ತುಂಬಿಸಿ, ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಲಾಗಿತ್ತು. ಕೇಂದ್ರ ಸ್ಥಾನದಲ್ಲಿರುವ ಚಾಲಕ, ನಿರ್ವಾಹಕರನ್ನು ವಲಸೆ ಕಾರ್ಮಿಕರನ್ನು ಬಿಟ್ಟು ಬರಲು ಬೆಂಗಳೂರಿಗೆ ತುಮಕೂರಿನ ಡಿಪೋದಿಂದ 50 ಬಸ್‌ಗಳನ್ನು ಕಳುಹಿಸಲಾಗಿದೆ. ಉಳಿದಂತೆ ದೂರದೂರಿನ ಸಿಬ್ಬಂದಿಗೆ ಯಾವುದೇ ಸಂದರ್ಭದಲ್ಲಿ ಸೇವೆಗೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ.

ಮೂರು ಸೀಟಿಗೆ ಇಬ್ಬರು, ಎರಡಿದ್ದರೆ ಒಬ್ಬ!: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಮೂರು ಜನರ ಸೀಟು ಇದ್ದರೆ ಇಬ್ಬರು, ಇಬ್ಬರು ಕೂರುವ ಸೀಟಿಗೆ ಒಬ್ಬರು ಕೂರಲು ಅವಕಾಶ ನೀಡಲಾಗಿದೆ. ಒಂದು ಬಸ್‌ನಲ್ಲಿ ಗರಿಷ್ಠ 26 ಜನ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಸೋಮವಾರದಿಂದ ಬಸ್ ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ನಿಷೇಧಾಜ್ಞೆ ಜಾರಿಗೊಳಿಸಿದ್ದಕ್ಕೆ 2 ವಾರ ಸಾರಿಗೆ ಬಸ್ ಸಂಚಾರ ಇಲ್ಲ, ಸರ್ಕಾರ ಸೂಚಿಸಿದಾಗ ಸಂಚಾರ ಆರಂಭಿಸಲು ಸಿದ್ಧ. ಗಜೇಂದ್ರಕುಮಾರ್ ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ