ಜಮಖಂಡಿ: ಇಂದಿನ ಸಮಾಜದ ಅಭಿರುಚಿ ಬದಲಾಗಿದೆ. ಹಾಡು, ಸಂಗೀತ, ಉಡುಗೆ-ತೊಡುಗೆ, ಬಾಂಧವ್ಯ, ಭಾಷೆ ಎಲ್ಲವೂ ಬದಲಾಗಿದೆ. ಸಮಾಜದ ದಿಕ್ಕು ಬದಲಾಗಿದೆ. ಯಾವ ಕಡೆಗೆ ಮುಖ ಮಾಡಿ ಹೊರಟಿದೆ ತಿಳಿಯುತ್ತಿಲ್ಲ. ಹಾಗಾಗಿ ಮೂಲ ಸಂಸ್ಕೃತಿ ಉಳಿಸದಿದ್ದರೆ ಉಳಿಗಾಲವಿಲ್ಲವೆಂದು ಅಥಣಿಯ ಮೋಟಗಿ ಮಠದ ಪ್ರಭು ಚೆನ್ನಬಸವ ಮಹಾಸ್ವಾಮಿಗಳು ಎಚ್ಚರಿಸಿದರು.
ನಗರದ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.29ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆಯ 6ನೇ ದಿನವಾದ ಭಾನುವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮನ್ನು ಬದಲಾಯಿಸಲು ಸಂತ ಮಹಾಂತರು ಹುಟ್ಟಿಬರಬೇಕಾಗಿಲ್ಲ. ನಾವೇ ಬದಲಾಗಬೇಕು. ಶರಣರ ಮುಂದುವರೆದ ಪೀಳಿಗೆಯಾಗಿ ಇಂದಿನವರ ಜವಾಬ್ದಾರಿ ಏನು? ಎಂದು ಪ್ರಶ್ನಿಸಿದ ಅವರು ನಮ್ಮ ಸಾಹಿತ್ಯಕ್ಕೆ, ಸಾಧ್ಯತೆಗಳಿಗೆ ನಾವೇ ಉತ್ತರವಾಗಬೇಕು. ಯುವಕರು ಸನ್ಮಾರ್ಗದಲ್ಲಿ ಸಾಗದಿದ್ದರೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ಹೃದಯ ರೋಗ ತಜ್ಞ ನಾಡೋಜ ಡಾ.ಎಚ್.ಜಿ. ದಡ್ಡಿ ಮಾತನಾಡಿ, ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತೇವೆ ಹೊರತು ಅವರ ತತ್ವಾದರ್ಶಗಳನ್ನು ಪಾಲಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಿ, ಅವರ ಸಂದೇಶಗಳು ಸಮಾಜಕ್ಕೆ ತಲುಪದಂತೆ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಡಿಎಸ್‌ಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶಾಮರಾವ ಘಾಟಗೆ ಮಾತನಾಡಿದರು. ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಯೋಗಿ ಬಂದಾನೊ ಭೋಗ ಸುಖವ ತ್ಯಾಗ ಮಾಡಿ... ಎಂಬ ಹಾಡು ಹೇಳಿ ಭಕ್ತರನ್ನು ರೋಮಾಂಚನಗೊಳಿಸಿದರು. ಝುಂಜರವಾಡದ ಬಸವರಾಜೇದ್ರ ಶರಣರು ಪ್ರವಚನ ನೀಡಿದರು. ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿದರು. ಹೂವಿನ ಹಿಪ್ಪರಗಿಯ ವಿಶ್ವನಾಥ ದೇವರು ಸಾನ್ನಿಧ್ಯ ವಹಿಸಿದ್ದರು.
ಅರ್ಬನ್ ಬ್ಯಾಂಕ್ ನಿರ್ದೇಶಕ ಕೀರಸಾಬ ಬಾಗವಾನ, ಪ್ರಭುಲಿಂಗ ಜನವಾಡ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಚಿನ್ಮಯ ಜಿರಲಿ, ಪ್ರಗತಿಪರ ರೈತ ಮುದಕಪ್ಪ ಜಮಖಂಡಿ, ಗೀತಾ ಮೇತ್ರಿ, ರೇಣುಕಾ ತೇಲಿ, ಕವಿತಾ ಬಿಜಾಪುರ, ನಗರಸಭೆ ಸದಸ್ಯೆ ಅನುಸೂಯಾ ಅಸುಗಡೆ ಇದ್ದರು.
ಗದುಗಿನ ಗವಾಯಿ ರವಿಕುಮಾರ ಬೆಣ್ಣಿ, ತಬಲಾ ವಾದಕ ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ಸ್ವಾಗತಿಸಿದರು. ಅಣ್ಣಾಸಾಹೇಬ ಜಗದೇವ ನಿರೂಪಿಸಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶರಣು ಸಮರ್ಪಿಸಿದರು.