ಜಿಲ್ಲೆ

ಬದುಕು ಬಲಿಕೊಡುವ ಬಾಲ್ಯವಿವಾಹಕ್ಕಿಲ್ಲ ತಡೆ

 6 ವರ್ಷಗಳಲ್ಲಿ 312 ಪ್ರಕರಣ ದಾಖಲು | ಅಪ್ರಾಪ್ತರ ಮದುವೆ ತಡೆಗೆ ಇಲಾಖೆ ಕಸರತ್ತು

ಬಾಲ್ಯ ವಿವಾಹ ಶಿಾರ್ಹ ಅಪರಾಧ ಎಂಬ ವಿಚಾರಗೊತ್ತಿದ್ದರೂ ಕಳೆದ 6 ವರ್ಷಗಳಲ್ಲಿ 312 ಬಾಲ್ಯ ವಿವಾಹ ನಡೆಸಲು ಮುಂದಾದ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ.

ಹೌದು... 2020ರಿಂದ 2025ರ ಸೆಪ್ಟೆಂಬರ್​ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 312 ಪ್ರಕರಣ ವರದಿಯಾಗಿದ್ದು, ಇವುಗಳಲ್ಲಿ 257 ಮದುವೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, 55 ಬಾಲ್ಯ ವಿವಾಹಗಳಲ್ಲಿ ಮಕ್ಕಳ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 55 ಬಾಲ್ಯ ವಿವಾಹಗಳು ಜರುಗಿವೆ. ಕರೊನಾ ಅವಧಿಯಲ್ಲಿ ಹೆಚ್ಚು ಪ್ರಕರಣ ನಡೆದಿದ್ದರೂ ನಂತರದ ವರ್ಷಗಳಲ್ಲೂ ಕಾನೂನಿನ ಭಯವಿಲ್ಲದೆ, ಬಾಲ್ಯ ವಿವಾಹಗಳು ನಡೆದಿರುವುದು ಆತಂಕಕಾರಿ ಬೆಳೆವಣಿಗೆ.

ಜಿಲ್ಲೆಯ ಬಹುತೇಕ ಬಾಲ್ಯವಿವಾಹ ಪ್ರಕರಣಗಳಲ್ಲಿ ಮದುವೆ ನಂತರವೇ ಸಹಾಯವಾಣಿಗೆ ಕರೆಗಳು ಬರುತ್ತಿದ್ದು, ಸಹಾಯವಾಣಿ ಪರಿಶೀಲನೆ ನಡೆಸಿದ ನಂತರವಷ್ಟೇ ಅಪ್ರಾಪ್ತರಿಗೆ ಮದುವೆ ಆಗಿರುವುದು ಬೆಳಕಿಗೆ ಬರುತ್ತಿವೆ. ಬಹುತೇಕ ಮದುವೆಗಳು ದೇವಾಲಯದ ಅಂಗಳ, ಇಲ್ಲವೇ ಮನೆಯಂಗಳದಲ್ಲಿ ನಡೆಯುತ್ತಿವೆ.

ಗುಟ್ಟು ಗೊತ್ತಾಗುತ್ತಿಲ್ಲ

ಬಹುತೇಕ ಮದುವೆಗಳು ಗುಟ್ಟಾಗಿಯೇ ನಡೆದಿರುವುದು ಅಧಿಕಾರಿಗಳ ಚಿಂತೆ ಹೆಚ್ಚಿಸಿದೆ. ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಮದುವೆ ಆದರೆ ಸಾಕ್ಷ್ಯಗಳು ಲಭ್ಯವಾಗುತ್ತವೆ. ಆದರೆ ಅಪ್ತಾಪ್ತರ ಮದುವೆಗಳು ಗೌಪ್ಯವಾಗಿಯೇ ನಡೆಯುತ್ತವೆ. ಒಂದು ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದರೂ ಜನರು ಮದುವೆ ನಡೆದೇ ಇಲ್ಲ ಎನ್ನುವಂತೆ ಸಿಬ್ಬಂದಿ ಮೇಲೆ ವಾಗ್ಯುದ್ಧ ನಡೆಸಿದ ಟನೆಗಳೂ ಇವೆ. ಇದರ ಹೊರತಾಗಿಯೂ ಮದುವೆ ನಡೆದಿರುವುದಕ್ಕೆ ಸಾಕ್ಷ್ಯ ಸಿಕ್ಕರೆ ಖಂಡಿತವಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಮಾಹಿತಿ ನೀಡುವುದೇ ಇಲ್ಲ

ಸಹಾಯವಾಣಿಗೆ ಬರುವ ಕರೆಗಳಲ್ಲಿ ಅತಿ ಹೆಚ್ಚಿನ ಕರೆಗಳು ಅಂತಿಮ ಹಂತದಲ್ಲಿ ಬರುತ್ತವೆ. ಮದುವೆ ಹಿಂದಿನ ದಿನ ಇಲ್ಲವೇ, ಮದುವೆ ಮುಗಿಯುವ ವೇಳೆಗೆ ಮಾಹಿತಿ ದೊರೆತು, ಅಧಿಕಾರಿಗಳು ಸ್ಥಳಕ್ಕೆ ತೆರಳುವ ವೇಳೆಗಾಗಲೇ ಮದುವೆಗಳು ಆಗಿರುತ್ತವೆ. ಸ್ಥಳಿಯವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಅಪ್ರಾಪ್ತರ ಮದುವೆ ಮಾಹಿತಿ ಇದ್ದರೂ, ಸ್ಥಳಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟವಿಲ್ಲದೆ ಮಾಹಿತಿ ನೀಡುವುದಿಲ್ಲ. ಕೆಲವರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಇನ್ನೂ ಕೆಲ ಸಂದರ್ಭದಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಪ್ರಯತ್ನವೂ ಆಗುತ್ತಿವೆ. ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಸ್ಥಳ ಪರಿಶೀಲಿಸಿದರೆ ಅಲ್ಲಿ ಮದುವೆಯೇ ನಡೆಯುತ್ತಿರುವುದಿಲ್ಲ. ಇಂತಹ ಟನೆಗಳೂ ಜರುಗಿವೆ. ಇದರ ಜತೆಗೆ, ಮದುವೆ ಆಗಿದ್ದರೂ ಪ್ರಾಪ್ತ ವಯಸ್ಸಿಗೆ ಮರುಮದುವೆ ಮಾಡಿರುವುದೂ ಕಂಡು ಬಂದಿವೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ಪಾಲಕರೇ ಹುಷಾರ್​

ಮದುವೆ ಮಾಡಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು, ಇಲ್ಲ.. ಒಳ್ಳೆಯ ಕಡೆ ಸಂಬಂಧ ಬಂದಿದೆ ಅಥವಾ ಇನ್ನಾವುದೋ ಒತ್ತಡಕ್ಕೆ ಮಣಿದು 18 ವರ್ಷ ಮೀರದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದು ಅಪರಾಧವಾಗಿದ್ದು, ಇದಕ್ಕೆ ಜೈಲು ಶಿೆಯನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಬಾಳು ಹಾಳು ಮಾಡುವ ಜತೆಗೆ, ತಮ್ಮ ಜೀವನವನ್ನು ಕಳೆದುಕೊಳ್ಳಬೇಡಿ.

ವಿಶಿಷ್ಟ ಪ್ರಕರಣ

ಇನ್ನು ಮಾಗಡಿಯಲ್ಲಿ ಕಾನೂನಿನಂತೆ 21 ವರ್ಷ ಮೀರದ ಯುವಕ ಮದುವೆ ಆಗಿದ್ದ. ಇಲ್ಲಿ ಯುವತಿಗೆ 18 ವರ್ಷ ಆಗಿದ್ದ ಕಾರಣ, ಅಪ್ರಾಪ್ತನನ್ನು ಮದುವೆ ಆದ ಕಾರಣಕ್ಕೆ ಯುವತಿ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದ ಮೂಲಕ ಕಾನೂನು ಯಾರನ್ನೂ ಬಿಡುವುದಿಲ್ಲ ಎನ್ನುವ ಎಚ್ಚರಿಕೆ ನೀಡಲಾಗಿದೆ.

ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು, ಇದರ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಸಾರ್ವಜನಿಕರೂ ಸಹ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಪ್ರಾಪ್ತರ ಮದುವೆ ಬಗ್ಗೆ ಮಾಹಿತಿ ನೀಡಬೇಕು. ಈ ಸಂಬಂಧ ದೇವಾಲಯಗಳು ಅರ್ಚಕರು, ಮಸೀದಿಗಳ ಮೌಲ್ವಿಗಳಿಗೂ ಅರಿವು ಮೂಡಿಸಲಾಗಿದೆ. | ರಜನಿ, ಡಿಸಿಪಿಒ, ಬೆಂಗಳೂರು ದಕ್ಷಿಣ ಜಿಲ್ಲೆ

-ಗಂಗಾಧರ್​ ಬೈರಾಪಟ್ಟಣ ರಾಮನಗರ