ಆಲೂರು: ಮಲೆನಾಡಿನ ಪ್ರಮುಖ ತಾಣಗಳಲ್ಲಿ ಒಂದಾಗಿರುವ ಆಲೂರಿನಲ್ಲಿ ರೈಲ್ವೆ ನಿಲ್ದಾಣವಿದ್ದರೂ ಸಂಚರಿಸುವ ಹತ್ತಾರು ರೈಲುಗಳಲ್ಲಿ ಒಂದೂ ನಿಲುಗಡೆ ನೀಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಂದರು ನಾಡು ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ಯಾಸೆಂಜರ್ ಹಾಗೂ ಎಕ್ಸಪ್ರೆಸ್ ರೈಲುಗಾಡಿಗಳು ಈ ಮಾರ್ಗದಲ್ಲಿಯೇ ಸಾಗುತ್ತವೆ. ಆದರೆ ಆಲೂರಿನಲ್ಲಿ ಇಳಿದುಕೊಳ್ಳಬೇಕಾದ ಹಾಗೂ ಹತ್ತುವ ಪ್ರಯಾಣಿಕರು ಸಕಲೇಶಪುರ ಇಲ್ಲವೇ ಹಾಸನ ರೈಲು ನಿಲ್ದಾಣವನ್ನು ಅವಲಂಬಿಸುವಂತಾಗಿದೆ. ಆಲೂರಿನಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂಬ ದಶಕಗಳ ಹೋರಾಟಕ್ಕೆ ಇದುವರೆಗೂ ನ್ಯಾಯ ದೊರೆತಿಲ್ಲ. ಪ್ರಸ್ತುತ ಸರ್ಕಾರವಾದರೂ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
2009ರಲ್ಲಿ ಆಲೂರು ಪಟ್ಟಣದಲ್ಲಿ ರೈಲು ನಿಲ್ದಾಣ ಪ್ರಾರಂಭವಾಗಿದೆ. ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಎಂಬ ಅಪಖ್ಯಾತಿಗೆ ಹೆಸರಾಗಿರುವ ಆಲೂರು ತಾಲೂಕು ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ನಿತ್ಯ ಬೆಂಗಳೂರು, ಮಂಗಳೂರು, ಕಾರವಾರ, ಕಣ್ಣೂರು ಕಡೆಯಿಂದ ಐದಾರು ಪ್ಯಾಸೆಂಜರ್, ಎಕ್ಸ್‌ಸ್ಪ್ರೆಸ್ ರೈಲು, ಗೊಬ್ಬರ, ಸಿಮೆಂಟ್, ಗ್ಯಾಸ್, ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನ ಸಾಗಣೆ ಮಾಡುವ ಹತ್ತಾರು ಗೂಡ್ಸ್ ರೈಲುಗಳು ಚಲಿಸುತ್ತಿವೆ. ರೈಲ್ವೆ ನಿಲ್ದಾಣವು ಪಟ್ಟಣದಿಂದ 1 ಕಿ.ಮೀ. ಹತ್ತಿರದಲ್ಲಿದ್ದು ಉತ್ತಮವಾದ ಡಾಂಬರು ರಸ್ತೆ ಹೊಂದಿದೆ. ಇಷ್ಟೆಲ್ಲ ಸೌಲಭ್ಯವಿದ್ದರೂ ರೈಲು ನಿಲುಗಡೆಗೆ ಭಾಗ್ಯವಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಸೇರಿ ಮಂಗಳೂರು ಕಾರವಾರದ ಕಡೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಸುಂದರ ಪ್ರದೇಶವನ್ನು ವೀಕ್ಷಿಸಲು ರೈಲು ಪ್ರಯಾಣ ಹೆಚ್ಚು ಅನುಕೂಲವಾಗಿದೆ. ಆಲೂರಲ್ಲಿ ರೈಲು ನಿಲುಗಡೆ ನೀಡಿದರೆ ರೈಲಿನಲ್ಲಿ ಸುಖಕರ ಪ್ರಯಾಣವನ್ನು ಕಡಿಮೆ ಖರ್ಚಿನಲ್ಲಿ ಮಾಡಬಹುದು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.