ಜಿಲ್ಲೆ

ಗಿರಿಜನರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಆಗಿಲ್ಲ

ಮಡಿಕೇರಿ
ಗಿರಿಜನರು ಕೊಡಗಿನ ಅರಣ್ಯ ಪ್ರದೇಶದಲ್ಲಿ ಶತಮಾನಗಳ ಕಾಲದಿಂದಲೂ ಬದುಕು ಕಟ್ಟಿಕೊಂಡಿದ್ದಾರೆ. ಕಾಡಿನಲ್ಲಿ ಸಿಗುವ ಸಂಪನ್ಮೂಲಗಳನ್ನು ಅವಲಂಬಿಸಿ ಇವರ ಜೀವನ ನಡೆಯುತ್ತದೆ. ಈ ಸಮುದಾಯದಲ್ಲಿ ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿ ಜನರು ವಿದ್ಯೆ ಕಲಿತು ಅಕ್ಷರಸ್ಥರಾಗಿರುವುದು ಹೊರತುಪಡಿಸಿದರೆ ಈಗಲೂ ಅನಕ್ಷರತೆ, ಮೂಢನಂಬಿಕೆಗಳ ನೆರಳಲ್ಲೇ ಇವರುಗಳ ಬದುಕು ಸಾಗುತ್ತಿದೆ. ಆದಿವಾಸಿಗಳು, ಬುಡಕಟ್ಟು ಸಮುದಾಯದವರನ್ನು ಎಲ್ಲಾ ರಾಜಕೀಯ ಪಕ್ಷಗಳೂ ಓಟ್ ಬ್ಯಾಂಕ್‌ಗಳ ರೀತಿಯಲ್ಲಿ ನೋಡುವುದೇ ಸಾಮಾನ್ಯವಾಗಿದ್ದು, ಇವರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳೇ ನಡೆದಿಲ್ಲ.
ಕೆಲವೊಮ್ಮೆ ಗಿರಿಜನರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಬದ್ಧತೆ ಮತ್ತು ಇಚ್ಛಾ ಶಕ್ತಿ ಕೊರತೆಯಿಂದ ಇವುಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಈ ಮಧ್ಯೆ ವನ್ಯಜೀವಿ ವಲಯ, ಸಂರಕ್ಷಿತಾರಣ್ಯ, ಹುಲಿ ಯೋಜನೆ, ಆನೆ ಕಾರಿಡಾರ್ ಹೀಗೆ ಹಲವು ನೆಪಗಳನ್ನು ನೀಡಿ ಕಾಡುಗಳಿಂದ ಗಿರಿಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಇದೇ ಕಾರಣಗಳನ್ನು ನೀಡಿ ಕಾಡಿನ ಮಕ್ಕಳನ್ನು ಅಭಿವೃದ್ಧಿ ಯೋಜನೆಗಳಿಂದಲೂ ವಂಚಿತರನ್ನಾಗಿ ಮಾಡಲಾಗಿದೆ.
ಬಯಲು ಶೌಚ ಮುಕ್ತ ಜಿಲ್ಲೆ ಎಂದು ಹೇಳಿಕೊಂಡರೂ ಹೆಚ್ಚಿನ ಹಾಡಿಗಳಲ್ಲಿ ಈಗಲೂ ಶೌಚಗೃಹಗಳೇ ಇಲ್ಲ. ಆಧುನಿಕ ಸಂವಹನ ಕ್ರಾಂತಿಯ ಮೊಬೈಲ್ ಫೋನ್‌ಗಳು ಹಾಡಿಗಳಿಗೆ ಬಂದಿದ್ದರೂ ಇವುಗಳನ್ನು ಚಾರ್ಜ್ ಮಾಡಿಕೊಳ್ಳಲು ವಿದ್ಯುತ್ ಸಂಪರ್ಕ ಇಲ್ಲ. ವಿದ್ಯುತ್ ಇರುವ ಮನೆಗಳಲ್ಲಿ ಒಮ್ಮೆ ಚಾರ್ಜ್ ಮಾಡಿಸಿಕೊಳ್ಳಲು ೧೦ ರೂ. ಕೊಡಬೇಕಾದ ಅನಿವಾರ್ಯತೆ ಇವರದ್ದು. ಸರ್ಕಾರ ಹಲವು ವಸತಿ ಯೋಜನೆಗಳನ್ನು ಜಾರಿ ಮಾಡಿದ್ದರೂ ಗಿರಿಜನರಿಗೆ ಗುಡಿಸಲು ವಾಸ ತಪ್ಪಲಿಲ್ಲ. ಕುಡಿಯುವ ನೀರಿಗಾಗಿ ಕಿ.ಮೀ.ಗಟ್ಟಲೆ ಅಲೆದಾಡುವ ಸ್ಥಿತಿ ಈಗಲೂ ಇದೆ. ರಸ್ತೆ ಸೌಲಭ್ಯವಂತೂ ದೂರದ ಮಾತು.
ಜಿಲ್ಲೆಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ೧೬೭ ಹಾಡಿಗಳಿದ್ದು, ೬೦ ಸಾವಿರದಷ್ಟು ಆದಿವಾಸಿಗಳು ಇರುವುದಾಗಿ ಹೇಳಲಾಗುತ್ತಿದೆ. ದೇಶ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವಾಗ ನಮ್ಮದೇ ಸಮಾಜದ ಭಾಗವಾದ ಆದಿವಾಸಿಗಳು, ಬಡುಕಟ್ಟು ಸಮುದಾಯದವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಒಳಗೊಳ್ಳುವಂತೆ ಮಾಡಿಕೊಂಡು ಜತೆಯಲ್ಲೇ ಕರೆದೊಯ್ಯುವುದು ಎಲ್ಲರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಲೌಡ್ ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಧಿಕಾರಿಗಳು ಗಿರಿಜನರ ಹಾಡಿಗಳಿಗೆ ತೆರಳಿ ಸೂಕ್ತ ದಾಖಲಾತಿಗಳನ್ನು ಸ್ಥಳದಲ್ಲೇ ಮಾಡಿಕೊಡಬೇಕು. ಜಾತಿ ದೃಢೀಕರಣ ಪತ್ರ ಸಿಕ್ಕಿದರೆ ಗ್ರಾಮ ಪಂಚಾಯಿತಿಯಿಂದ ಮನೆಗಳನ್ನು ಮಾಡಿಕೊಡಬಹುದು. ಹಳೆಯ ಜಾತಿ ದೃಢೀಕರಣ ಪತ್ರ ಹೊಂದಿದವರಿಗೆ ಸೌಲಭ್ಯ ಕೊಡಬೇಕು. ಸರ್ಕಾರಿ ಸೌಲಭ್ಯವಿಲ್ಲದೆ, ಎಷ್ಟು ವರ್ಷ ಬದುಕಲು ಸಾಧ್ಯ ? ಅಧಿಕಾರಿಗಳು ಮನಸ್ಸು ಮಾಡಿದರೆ, ಎಲ್ಲರಿಗೂ ದಾಖಲಾತಿ ಮಾಡಿಕೊಡಬಹುದು.
ಅನುಕುಮಾರ್, ಸದಸ್ಯ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ.

ಗಿರಿಜನರ ಹಾಡಿಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕೊಡಬೇಕು. ಜಾಗದ ದಾಖಲಾತಿ ಇಲ್ಲ ಎಂಬ ಕಾರಣ ಕೊಟ್ಟು, ವಾಸಕ್ಕೆ ಮನೆ ನಿರ್ಮಿಸಿ ಕೊಡದಿರುವುದು ಸರಿಯಲ್ಲ. ಗಿರಿಜನರು ಮಳೆಗಾಲದಲ್ಲಿ ಗುಡಿಸಲ್ಲಿ ವಾಸ ಮಾಡುವುದು ಅತ್ಯಂತ ದುರಂತ. ಪ್ರತಿಯೊಬ್ಬರಿಗೆ ವಾಸಕ್ಕೆ ಯೋಗ್ಯವಾದ ಮನೆ ಸಿಗಬೇಕು.
ಎಚ್.ಎಂ.ಸೋಮಪ್ಪ, ಕಾರ್ಮಿಕ ಮುಖಂಡ, ಸೋಮವಾರಪೇಟೆ

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ ಹಾಡಿಯ ಜೇನು ಕುರುಬ ಸಮುದಾಯದ ೭೨ ಕುಟುಂಬದ ನೂರಕ್ಕೂ ಹೆಚ್ಚು ಮಂದಿ ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಬದುಕು ದೂಡುತ್ತಿದ್ದಾರೆ. ಹಾಡಿ ಅಭಿವೃದ್ಧಿಯಿಂದ ದೂರ ಉಳಿದಿದೆ. ೭೫ ವರ್ಷ ಕಳೆದರೂ ಇನ್ನೂ ಕೂಡ ಹಾಡಿಯಲ್ಲಿ ವಿದ್ಯುತ್ ಬೆಳಕು ಕಂಡಿಲ್ಲ. ಇಂದಿಗೂ ಕತ್ತಲೆಯಲ್ಲಿ ಬದುಕು ಕಳೆಯುವಂತಾಗಿದೆ. ಇದು ಕೇವಲ ಒಂದು ಉದಾಹರಣೆ ಮಾತ್ರ. ಜಿಲ್ಲೆಯಲ್ಲಿ ಇಂಥ ಹಾಡಿಗಳು ತುಂಬಾ ಇವೆ
ಶೋಭಾ, ಹಾಡಿ ಮುಖಂಡರು

ಕೊಡಗಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯ ಮತ್ತು ಆದಿವಾಸಿಗಳು ವಾಸ ಮಾಡುತ್ತಿದ್ದಾರೆ. ಈ ಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ಗಳಲ್ಲಿ ಅನುದಾನ ಮೀಸಲಿಟ್ಟರೂ ಕೊಡಗಿಗೆ ಜನಸಂಖ್ಯೆಗೆ ಅನುಗುಣವಾಗಿ ಪಾಲು ಸಿಗುತ್ತಿಲ್ಲ. ಬುಡಕಟ್ಟು ಸಮುದಾಯ ಮತ್ತು ಆದಿವಾಸಿಗಳು ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಲು ಇದೇ ಪ್ರಮುಖ ಕಾರಣವಾಗಿದೆ. ಇಲ್ಲಿಯ ಜನಸಂಖ್ಯೆ ಆಧಾರದಲ್ಲಿ ವರ್ಷಕ್ಕೆ ಕನಿಷ್ಠ ೧ ಸಾವಿರ ಕೋಟಿ ರೂ. ಆದರೂ ಅನುದಾನ ಸಿಗಬೇಕು. ಈ ರೀತಿ ಆದರೆ ಮುಂದಿನ ೫ ವರ್ಷಗಳಲ್ಲಿ ಜಿಲ್ಲೆಯ ಬುಡಕಟ್ಟು ಸಮುದಾಯದ ಪೈಕಿ ಶೇ. ೯೦ರಷ್ಟು ಜನರು ಸಮಾಜದ ಮುಖ್ಯ ವಾಹಿನಿಯಲ್ಲಿ ಇರುತ್ತಾರೆ.
ಕುಡಿಯರ ಮುತ್ತಪ್ಪ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ, ಮಡಿಕೇರಿ ತಾಲೂಕು

ಗಿರಿಜನರಿಗೆ ಬೇರೆ ಬೇರೆ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಆದರೆ ಅವರು ಇಂದು ಕೂಡ ಹಾಡಿಗಳಲ್ಲಿಯ ಗುಡಿಸಿಲುಗಳಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಗಿರಿಜನರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನಗಳು ಹರಿದು ಬರುತ್ತದೆ. ಆದರೆ ಅನುದಾನ ಸದ್ಬಳಕೆಯಾಗದೆ ಗಿರಿಜನರು ಅಭಿವೃದ್ಧಿ ಹೊಂದದೆ ಮತ್ತಷ್ಟು ಹಿಂದುಳಿಯುವಂತಾಗಿದೆ. ಗಿರಿಜನರಿಗೆ ಭೂಮಿಯ ಹಕ್ಕು ಪತ್ರ ನೀಡುವುದರ ಜೊತೆಗೆ ವ್ಯಯಕ್ತಿಕ ಹಕ್ಕುಪತ್ರ ನೀಡಬೇಕು. ಅವರ ಭವಿಷ್ಯ ರೂಪಿಸಲು ಇತರೆ ಇಲಾಖೆಯ ನೆರವು ಪಡೆದು ಹಾಡಿಗಳಲ್ಲಿ ವಿದ್ಯುತ್, ನೀರು ಮತ್ತು ರಸ್ತೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರಬೇಕು. ಇದರಿಂದಾಗಿ ಅವರು ನೆಮ್ಮದಿಯ ಜೀವನ ಕಾಣಬಹುದು.
ಕವಿತಾ, ದೈಹಿಕ ಶಿಕ್ಷಣ ಶಿಕ್ಷಕಿ, ಶನಿವಾರಸಂತೆ

ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಕೊಡಗಿನ ಕಾಡುಗಳಲ್ಲಿ ವಾಸಿಸುತ್ತಿರುವ ಗಿರಿಜನರು ಮೂಲ ಸೌಲಭ್ಯಗಳಿಂದ ವಂಚಿತರಾಗಿರುವುದು ದುರ್ದೈವದ ಸಂಗತಿ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ಆಳ್ವಿಕೆ ನಡೆಸುವ ಸರ್ಕಾರಗಳ ಮೇಲಿರುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಪ್ರಜೆಗಳಿಗೆ ನೀಡುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಅವರಿಗೂ ವಿಸ್ತರಿಸಬೇಕು. ಸರ್ಕಾರಿ ಜಾಗವನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು. ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಡುವ ಮೂಲಕ ಅವರು ಸಹ ಎಲ್ಲರಂತೆ ಆರ್ಥಿಕವಾಗಿ ಸದೃಢರಾಗಿ ಸ್ವಾಭಿಮಾನದ ಮತ್ತು ನೆಮ್ಮದಿಯ ಬದುಕನ್ನು ಸಾಗಿಸಲು ನೆರವಾಗಬೇಕು. ಅವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿ ಮಾಡಬೇಕು.
ಪ್ರಮೋದ್, ಉಪನ್ಯಾಸಕ, ಶನಿವಾರಸಂತೆ

ಗಿರಿಜನರು ಇಂದಿಗೂ ಕಾಡಿನಲ್ಲಿ ಸಣ್ಣ ಪುಟ್ಟ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿರುವುದು ದುರಂತ. ಇದು ಈಗಿನ ಸಮಸ್ಯೆಯಲ್ಲ. ಹಿಂದಿನಿಂದಲೂ ಬರುತ್ತಿರುವಂತ ಸಮಸ್ಯೆ. ಈ ಸಮಸ್ಯೆಗೆ ಅಲ್ಲಿಯ ಸ್ಥಳಿಯ ಗ್ರಾಮ ಪಂಚಾಯಿತಿ ಮತ್ತು ಇದಕ್ಕೆ ಸಂಬಂಧಪಟ್ಟ ಇಲಾಖೆ ಸರ್ವೆ ಮಾಡಿ ಇಲ್ಲಿ ವಾಸಿಸುವ ಜನಗಳಿಗೆ ಮನೆ ಮಾಡುವ ಅವಶ್ಯಕತೆ ಇರುತ್ತದೆ. ಇವರಿಗೆ ಸಂಬಂಧ ಪಟ್ಟ ದಾಖಲಾತಿಗಳೇ ಇರುವುದರಿಲ್ಲ. ಇದನ್ನು ಒದಗಿಸುವ ಕೆಲಸ ಇಲಾಖೆಗಳು ಮಾಡಬೇಕು.
ಜಿ. ಎಲ್. ಜನಾರ್ದನ್, ಜಿಲ್ಲಾ ಸಂಚಾಲಕ, ಮಾನವ ಬಂಧುತ್ವ ವೇದಿಕೆ ಕೊಡಗು

ಪ್ರತೀ ಸರ್ಕಾರ ಬಂದಾಗಲೂ ನಮ್ಮ ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಸಂಪೂರ್ಣವಾಗಿ ನಮಗೆ ಎಲ್ಲಾ ಸೌಲಭ್ಯ ಸಿಕ್ಕಿಲ್ಲ. ಇನ್ನೂ ಅದೆಷ್ಟೋ ಜನ ಟಾರ್ಪಲ್ ಹೊದಿಕೆ ಅಡಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಆದಷ್ಟು ಬೇಗ ಎಲ್ಲರಿಗೂ ಕನಿಷ್ಠ ಸ್ವಂತ ಸೂರು ಸಿಕ್ಕುವಂತಾಗಲಿ.
ಜೆ.ಕೆ ತಿಮ್ಮ, ಗಿರಿಜನ ಮುಖಂಡ, ನಾಗರಹೊಳೆ

ಗಿರಿಜನರ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ಇವರಿಗಾಗಿ ೧೧ ಆಶ್ರಮ ಶಾಲೆಗಳು, ೯ ವಿದ್ಯಾರ್ಥಿ ನಿಲಯಗಳು, ೧ ಏಕಲವ್ಯ ಶಾಲೆ, ೧ ಮೊರಾರ್ಜಿ ಶಾಲೆ ಇದೆ. ಏಕಲವ್ಯ ಮತ್ತು ಮೊರಾರ್ಜಿ ಶಾಲೆಯಲ್ಲಿ ಈ ಬಾರಿ ಶೇ. ೧೦೦ ಫಲಿತಾಂಶ ಬಂದಿದೆ. ಎಲ್ಲಾ ತಾಲೂಕುಗಳಲ್ಲೂ ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಸೌಲಭ್ಯ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗಿರಿಜನರು ಹೆಚ್ಚು ಇರುವ ವಿರಾಜಪೇಟೆ ತಾಲೂಕಿನಲ್ಲಿ ನಮ್ಮ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಮನೆಗಳಿಗಾಗಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ. ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುತ್ತದೆ.
ಎಸ್. ಹೊನ್ನೇಗೌಡ, ಐಟಿಡಿಪಿ ಅಧಿಕಾರಿ, ಕೊಡಗು

ರಾಜಕಾರಣಿಗಳ ಭರವಸೆ ಕೇಳಿ ಸಾಕಾಗಿದೆ. ದಿಡ್ಡಳ್ಳಿ ಹಾಡಿಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಕೆಲವು ಮನೆಗಳಲ್ಲಿ ಶೌಚಾಲಯ ಗುಂಡಿ ತುಂಬಿ ಹೋಗಿ, ಸ್ವಚ್ಛಗೊಳಿಸಿದ ಕಾರಣ ಆ ಸುತ್ತಲಿನ ಪ್ರದೇಶವೇ ದುರ್ವಾಸನೆಯಿಂದ ಕೂಡಿದೆ. ಶಾಸಕರು ಬಂದು ಆಶ್ವಾಸನೆ ನೀಡಿ ಹೋಗಿದ್ದು ಬಿಟ್ಟರೆ ಬೇರೆ ಏನೂ ವ್ಯತ್ಯಾಸ ಆಗಿಲ್ಲ. ಹಾಡಿಯಲ್ಲಿ ಚರಂಡಿ ಸಮಸ್ಯೆ ಉಲ್ಬಣವಾಗಿದೆ. ತಕ್ಷಣ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನೋಡಿಕೊಳ್ಳಬೇಕು.
ಪಿ.ಸಿ. ಮಣಿ, ದಿಡ್ಡಳ್ಳಿ ನಿವಾಸಿ.