ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ಕೌಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೇಟಿ ನೀಡಿದರು. ಡಾ. ಗೋಪಾಲಕೃಷ್ಣ, ನವೀನ್‌ಕುಮಾರ್ ಇತರರಿದ್ದರು. 
ಜಿಲ್ಲೆ

ನೀರು ಪೂರೈಕೆಗೆ ಕೊರತೆಯಿಲ್ಲ ಅನುದಾನ

ಕೊಪ್ಪ: ಜಿಲ್ಲಾದ್ಯಂತ ಬರ ಎದುರಾಗಿದೆ. ಮಲೆನಾಡು ಭಾಗದಲ್ಲಿಯೂ ಝರಿ, ಹಳ್ಳ, ನದಿಗಳು ಬತ್ತಿದ ಪರಿಣಾಮ ಕೆಲವೆಡೆ ನೀರಿನ ಸಮಸ್ಯೆಯಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಮಂಗಳವಾರ ಮೇಗುಂದ ಹೋಬಳಿ ಕೌಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಪ್ರತಿ ತಾಲೂಕಿಗೆ ಭೇಟಿ ನೀಡಿ ನೀರಿನ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳ ಜತೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತೆರೆಳಿ ಪರಿಶೀಲಿಸುತ್ತಿದ್ದೇನೆ. ಸಮಸ್ಯೆ ಯಾವ ರೀತಿಯಲ್ಲಿ ಉಂಟಾಗಿದೆ ಎಂದು ತಿಳಿದು ಪರಿಹರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಏಪ್ರಿಲ್‌ನಲ್ಲಿ ಮಳೆಯಾಗದೆ ಇರುವುದರಿಂದ ಮತ್ತೆ ಸಮಸ್ಯೆಯಾಗುವ ಸಂಭವವಿದೆ. ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗಬಹುದು. ಬೋರ್‌ವೆಲ್ ಕೊರೆದು ನೀರು ಪೂರೈಕೆ ಮಾಡಲು ತಿಳಿಸಲಾಗಿದೆ. ನಿಲುವಾಗಿಲು ಗ್ರಾಮದ ಕುಪ್ಪಳಿಯಲ್ಲಿ ನೀರಿನ ಸಮಸ್ಯೆಯಾಗಿದೆ. ಆ ಗ್ರಾಮಕ್ಕೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾತನಾಡಿ, ಕಡಿಮೆ ಮಳೆ ಹಾಗೂ ಬಿಸಿಲಿನ ತಾಪ ಹೆಚ್ಚಾದ ಕಾರಣ ಮಲೆನಾಡಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ನೀರಿನ ಸಮಸ್ಯೆ ಇರುವ ಗ್ರಾಮದಲ್ಲಿ ವೈಜ್ಞಾನಿಕವಾಗಿ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಪೂರೈಕೆ ಮಾಡುತ್ತಿದ್ದೇವೆ. ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ 3.30 ಕೋಟಿ ರೂಪಾಯಿ, ಜಿಲ್ಲಾಡಳಿತದಲ್ಲಿ 12 ಕೋಟಿ ರೂಪಾಯಿ ಇದೆ. ಇದನ್ನು ನೀರಿನ ಸಮಸ್ಯೆ ಪರಿಹಾರಕ್ಕೆ ಮೀಸಲಿರಿಸಲಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಮೂಲವಿಲ್ಲದೆ ಪೈಪ್‌ಗಳನ್ನು ಹಾಕಿರುವುದು ಗಮನಕ್ಕೆ ಬಂದಿದೆ. ನೀರಿನ ಮೂಲ ಸಿಗದೆ ಕೆಲಸ ಮಾಡದಂತೆ ಸೂಚಿಸಲಾಗಿದೆ. ಜೆಜೆಎಂನಲ್ಲಿ ಕಳಪೆ ಕೆಲಸವಾದ ದೂರು ಕೂಡ ಬಂದಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಹಾಗೂ ಕೆಲವೆಡೆ ಕೆರೆ ನೀರು ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ. ಒತ್ತುವರಿಗಳನ್ನು ಖುಲ್ಲಾಗೊಳಿಸಲು ಸೂಚಿಸಲಾಗಿದೆ. ಕೆರೆ ನೀರನ್ನು ಸಾರ್ವಜನಿಕರ ಉಪಯೋಗಗಕ್ಕೆ ನೀಡದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು. ಅಧಿಕಾರಿ ನವೀನ್‌ಕುಮಾರ್ ಇತರರಿದ್ದರು.