ಜಿಲ್ಲೆ

ಕ್ರಿಸ್​ಮಸ್, ಹೊಸ ವರ್ಷ ಆಚರಣೆಗಿಲ್ಲ ನಿರ್ಬಂಧ: ಪ್ರತ್ಯೇಕ ಮಾರ್ಗಸೂಚಿಯೂ ಇಲ್ಲ, ಸಿಎಂ ಘೋಷಣೆ

ಬೆಂಗಳೂರು: ಜಾಗತಿಕವಾಗಿ ಹಾಗೂ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ವೈರಾಣು ರೂಪಾಂತರಿ ಉಪತಳಿ ಸೋಂಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲೂ ಸಕ್ರಿಯ ಪ್ರಕರಣಗಳು ಹೆಚ್ಚಿದ್ದರೂ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಅಬಾಧಿತವಾಗಿರಲಿದೆ.

ಗುಂಪುಗೂಡಿ ಆಚರಣೆ, ಜನದಟ್ಟಣೆಯಿರುವೆಡೆ ಮಾಸ್ಕ್ ಧರಿಸುವುದು ಉತ್ತಮ. ಕೇಂದ್ರ, ರಾಜ್ಯ ಸರ್ಕಾರಗಳು ಈಗಾಗಲೇ ಹೊರಡಿಸಿದ ಮಾರ್ಗ ಸೂಚಿ, ಸಲಹೆಗಳನ್ನು ಪಾಲಿಸಿದರೆ ಸಾಕು. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಪ್ರತ್ಯೇಕವಾಗಿ ಮಾರ್ಗಸೂಚಿ ಹೊರಡಿಸುವುದಿಲ್ಲ. ಜತೆಗೆ ಯಾವುದೇ ನಿರ್ಬಂಧ ವಿಧಿಸುವುದೂ ಇಲ್ಲ. ಜನರು ಸ್ವಯಂಪ್ರೇರಿತವಾಗಿ ಮುನ್ನೆಚ್ಚರಿಕೆ ವಹಿಸಲಿ ಎಂದು ಸರ್ಕಾರ ಬಯಸಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಕೋವಿಡ್ ಕುರಿತಾಗಿ ಉನ್ನತಮಟ್ಟದ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿರ್ಧಾರ ಗಳನ್ನು ಘೋಷಿಸಿದರು.

ಅತಿಯಾಗಿ ಬಿಂಬಿಸಬೇಡಿ: ರಾಜ್ಯದಲ್ಲಿ ಸಕ್ರಿಯ ಸೋಂಕಿನ ಪ್ರಕರಣ ಗಳ ಸಂಖ್ಯೆ 92ಕ್ಕೆ ಏರಿರುವುದು ನಿಜ. ಸೋಂಕಿ ನಿಂದ ಮೃತಪಟ್ಟ ಮೂವರಿಗೆ ಕೋವಿಡ್ ಜತೆಗೆ ಬೇರೆ ಕಾಯಿಲೆಗಳೂ ಇದ್ದವು ಎಂದು ಸಿಎಂ ಹೇಳಿದರು.

ಕೋವಿಡ್ ಪರೀಕ್ಷೆ ಹೆಚ್ಚಿಸಿದಂತೆ ಸೋಂಕಿತರ ಸಂಖ್ಯೆ ಹೆಚ್ಚಲೂಬಹುದು. ಆದರೆ, ಕೋವಿಡ್ ಹೊಸ ಉಪತಳಿ ಬಗ್ಗೆ ಅತಿಯಾಗಿ ಬಿಂಬಿಸುವುದು ಬೇಡ ಜನರು ಈ ಕುರಿತು ಆತಂಕಪಡುವ ಅಗತ್ಯವಿಲ್ಲ. ದೈನಂದಿನ ಜೀವನ ನಿರ್ವಹಿಸಿ, ಸಲಹೆಗಳನ್ನು ಅನುಸರಿಸಿ ಎಂದು ಸಿಎಂ ಸಿದ್ದರಾಮಯ್ಯ ಹಿತನುಡಿದರು. ಅಂತಾರಾಜ್ಯ ಗಡಿ ಸೇರಿ ಎಲ್ಲಿಯೂ ಕಠಿಣ ನಿರ್ಬಂಧ ವಿಧಿಸುವ ಪರಿಸ್ಥಿತಿ ತಲೆದೋರಿಲ್ಲ. ಆದರೆ ಗಡಿಗಳಲ್ಲಿ ನಿಗಾ, ಜ್ವರ, ಶೀತ ಮತ್ತಿತರ ಅನಾರೋಗ್ಯ ಸಮಸ್ಯೆಯುಳ್ಳವರನ್ನು ಪರೀಕ್ಷಿಸಲು ತಿಳಿಸಲಾಗಿದೆ. ರಾಜ್ಯದಲ್ಲಿ ತೀವ್ರ ಶೀತಜ್ವರ, ಉಸಿರಾಟ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಸೂಕ್ತ ವೈದ್ಯೋಪಾಚಾರ ಪಡೆದು, ಆದಷ್ಟು ಮನೆಯಲ್ಲೇ ಇರಬೇಕು. ಸೋಂಕು ಲಕ್ಷಣವುಳ್ಳವರು ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿರುವುದು ಲೇಸು ಎಂದರು.