ಶಿವಮೊಗ್ಗ: ರಾಜ್ಯದಲ್ಲಿ ಮೂರು ತಿಂಗಳಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಪರಿಹಾರ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದೂರಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರೈತ ದ್ವೇಷಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನೀಡುತ್ತಿದ್ದ 6 ಸಾವಿರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಿಂದೆ ನಾಲ್ಕು ಸಾವಿರ ರೂ. ನೀಡುತ್ತಿತ್ತು. ಅದನ್ನು ನೀಡದೆ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದ ರೈತವಿದ್ಯಾನಿಧಿ ಯೋಜನೆ ಕೂಡ ರದ್ದುಗೊಳಿಸಿದ್ದಾರೆ. ಜಿಲ್ಲೆಗೊಂದು ಗೋಶಾಲೆಯನ್ನು ರದ್ದು ಮಾಡಿದ್ದಾರೆ. ಈ ಎಲ್ಲ ಯೋಜನೆಗಳನ್ನು ಕೂಡಲೇ ಪುನರಾರಂಭ ಮಾಡಬೇಕು. ಉಚಿತ ವಿದ್ಯುತ್ ಎಂದು ಹೇಳಿ ಮೂರು ಪಟ್ಟು ದರ ಏರಿಸಿದ್ದಾರೆ. ಈ ಅವೈಜ್ಞಾನಿಕ ದರವನ್ನು ಕಡಿಮೆ ಮಾಡಬೇಕು. ಇದು ಸಾಧ್ಯವಾಗದಿದ್ದಲ್ಲಿ ಇಂಧನ ಸಚಿವರು ರಾಜೀನಾಮೆ ನೀಡಿ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.