ಜಿಲ್ಲೆ

ಪ್ರತಿಪಕ್ಷಗಳ ಒಕ್ಕೂಟ ಸಭೆಯಿಂದ ರಾಜಕೀಯ ಲಾಭವಿಲ್ಲ

ಹುಬ್ಬಳ್ಳಿ: ಪ್ರತಿಪಕ್ಷಗಳ ಒಕ್ಕೂಟದಿಂದ ನಾಳೆ ನಡೆಯಲಿರುವ ಸಭೆಯಿಂದ ಯಾವುದೇ ರಾಜಕೀಯ ಲಾಭವಿಲ್ಲ. ಪ್ರತಿಪಕ್ಷಗಳು ಭಾರತದಲ್ಲಿ ಶಕ್ತಿಯುತವಾಗಿಲ್ಲ. ಇದರಲ್ಲಿ ಪ್ರಾದೇಶಿಕ ಪಕ್ಷಗಳೇ ಹೆಚ್ಚಿವೆ. ಅವೆಲ್ಲ ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ಲೇಷಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದು ಒಗ್ಗಟ್ಟಾಗುತ್ತಿದ್ದಾರೆ. ಇದು ಸಲೀಸಲ್ಲ. ಪ್ರತಿಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ. ನಿರ್ದಿಷ್ಟ ಕಾರ್ಯಕ್ರಮವಿಲ್ಲ ಎಂದು ಮೂದಲಿಸಿದರು. ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಇದೆ. ಭಾರತ ದೇಶವು ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ ಎಂದರು.

ಜೆಡಿಎಸ್ ಜತೆ ಮೈತ್ರಿ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ನಮ್ಮ ಪಕ್ಷದ ವರಿಷ್ಠರು ಮತ್ತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಡುವೆ ಇರುವ ಮಾತುಕತೆ ಇದು. ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಅವರು ಕೆಲ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆ ಫಲಶ್ರುತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ. ವಿಧಾನಸಭೆ ಪ್ರತಿಪಕ್ಷ ಸ್ಥಾನದ ಆಯ್ಕೆ ಜು. 18ರ ನಂತರ ಘೊಷಣೆ ಆಗಬಹುದು ಎಂಬ ಮಾಹಿತಿ ಇದೆ ಎಂದರು.

ಮಾಜಿ ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಕೇವಲ ಊಹಾಪೋಹ. ಗೃಹಲಕ್ಷ್ಮೀ ಯೋಜನೆಯಲ್ಲಿ ಈಗಾಗಲೇ ಯಡವಟ್ಟಾಗಿದೆ. ದಿನಾಂಕದ ಮೇಲೆ ದಿನಾಂಕ ಹಾಕಿ ಮುಂದೂಡುತ್ತಿದ್ದಾರೆ. ಇದಕ್ಕೆ ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸುತ್ತಿಲ್ಲ. ದೊಡ್ಡ ಭಾರವಾಗುತ್ತಿರುವ ಗೃಹಲಕ್ಷ್ಮೀ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ದಿನಾಂಕ ಮುಂದೂಡಿ ಕೆಲವೇ ಸಮಯದಲ್ಲಿ ಕೆಲವರಿಗೆ ಮಾತ್ರ ಪ್ರಾರಂಭ ಮಾಡುವ ಇರಾದೆ ಇದೆ. ತಾಯಂದಿರಿಗೆ, ರಾಜ್ಯದ ಹೆಣ್ಣುಮಕ್ಕಳಿಗೆ ಭ್ರಮನಿರಸನ ಮೂಡಿದೆ. ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದರು.