ಜಿಲ್ಲೆ

ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳಿಯರಿಗಿಲ್ಲ ಕಾಯಂ ಉದ್ಯೋಗ

ಕೋಲಾರ: ಜಿಲ್ಲೆಯ ನರಸಾಪುರ, ವೇಮಗಲ್​ ಮತ್ತು ಮಾಲೂರು ಕೈಗಾರಿಕಾ ಪ್ರಾಂಗಣದ ಹಲವು ಕೈಗಾರಿಕಾ ಪ್ರದೇಶಗಳಲ್ಲಿ ಟಾಟಾ, ಹೋಂಡಾ, ವೋಲ್ವೋ ಸೇರಿ ಪ್ರತಿಷ್ಠಿತ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದ್ದರೂ ಸ್ಥಳಿಯರಿಗೆ ನಿರೀತ ಅವಕಾಶ ಲಭಿಸುತ್ತಿಲ್ಲ ಎಂದು ಆಕ್ರೋಶ ಭುಗಿಲೆದ್ದಿದೆ.

ನಮ್ಮ ನೆಲ, ಜಲವನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿರುವ ಬಂಡವಾಳ ಶಾಹಿಗಳು ಹೊರ ರಾಜ್ಯದವರಿಗೆ ಉನ್ನತ ಮಟ್ಟದ ಕಾಯಂ ಉದ್ಯೋಗಾವಕಾಶಗಳನ್ನು ನೀಡುತ್ತಿವೆ. ಸ್ಥಳಿಯರನ್ನು ಗುತ್ತಿಗೆ ಆಧಾರದ ಮೇಲೆ ಸೇವಾ ಭದ್ರತೆ ನೀಡದೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.

ಸ್ಥಳಿಯ ಜನಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತುವುದರಲ್ಲಿ ವಿಫಲವಾಗಿರುವ ಕಾರಣ ಕಂಪನಿ ಮಾಲೀಕರು ಸ್ಥಳಿಯರನ್ನು ಸಂಪೂರ್ಣ ರ್ನಿಲಕ್ಷಿಸುತ್ತಿದ್ದಾರೆ. ಈಗಾಗಲೇ ಟಾಟಾ ಕಂಪನಿಯ ಮೊಬೈಲ್​ ಬಿಡಿ ಭಾಗಗಳ ತಯಾರಿಕಾ ಘಟಕ ನಡೆಯುತ್ತಿದ್ದು, ಅದರಲ್ಲಿ ಶೇ.50 ಕ್ಕೂ ಹೆಚ್ಚಿನ ಕಾರ್ಮಿಕರು ಹೊರ ರಾಜ್ಯದವರೇ ಆಗಿದ್ದಾರೆ. ಈಗ ಹೆಲಿಕಾಪ್ಟರ್​ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದ್ದು, ಈಗಲಾದರೂ ಸ್ಥಳಿಯ ಯುವಕ ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕೆಂಬುದು ಸ್ಥಳಿಯರ ಬೇಡಿಕೆಯಾಗಿದೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಜಪಾನ್​ ಮೂಲದ ವಿಸ್ಟ್ರಾನ್​ ಮೊಬೈಲ್​ ಬಿಡಿ ಭಾಗಗಳ ತಯಾರಿಕಾ ಘಟಕ ಕೋಲಾರದಲ್ಲಿ ಕಂಪನಿ ಸ್ಥಾಪನೆಗೆ ಮುಂದಾದಾಗ ಶೇ.80 ಕ್ಕೂ ಹೆಚ್ಚು ಸ್ಥಳಿಯ ಯುವಕ ಯುವತಿಯರಿಗೆ ಉದ್ಯೋಗಾವಕಾಶ ನೀಡುವಂತೆ ಒಪ್ಪಂದ ಮಾಡಿ ಕಂಪನಿ ಸ್ಥಾಪನೆಗೆ ಅವಕಾಶ ನೀಡಲಾಯಿತು. ಮೊದಲಿಗೆ ಒಪ್ಪಂದದಂತೆ ಸ್ಥಳಿಯರಿಗೆ ಅವಕಾಶ ನೀಡಲಾಯಿತು. ನಂತರ ಸರ್ಕಾರದ ಒಪ್ಪಂದವನ್ನು ಸಂಪೂರ್ಣ ರ್ನಿಲಕ್ಷಿಸಿ ಹೊರ ರಾಜ್ಯದವರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುತ್ತಿದ್ದಾರೆ. ನಮ್ಮದೇ ಜಿಲ್ಲೆಯಲ್ಲಿ ಪ್ರತಿಷ್ಠಿತ ಕಂಪನಿಗಳು ಸ್ಥಾಪನೆಯಾಗಿದ್ದರು, ನಮ್ಮ ಜಿಲ್ಲೆಯ ಯುವಕ&ಯುವತಿಯರು ಕಾಯಂ ಮತ್ತು ಉನ್ನತ ಮಟ್ಟದ ಉದ್ಯೋಗಕ್ಕಾಗಿ ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿಯಿದೆ. ಇನ್ನಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಥಳಿಯರಿಗೆ ಉನ್ನತ ಉದ್ಯೋಗಗಳು ಲಭಿಸುವಂತೆ ಮಾಡಲಿ.

- ಸಿ.ಎಂ.ಆರ್​ ಶ್ರೀನಾಥ್​

ಜೆಡಿಎಸ್​ ಮುಖಂಡ

5 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ನಮ್ಮನ್ನು ಕಂಪನಿ ನೌಕರರನ್ನಾಗಿ ಪರಿಗಣಿಸಿಲ್ಲ. ಪ್ರತಿ ವರ್ಷಕ್ಕೊಮ್ಮೆ ಗುತ್ತಿಗೆ ಮೇರೆಗೆ ಮರು ನೇಮಕಾತಿ ಮಾಡಿಕೊಳ್ಳುತ್ತಲೇ ಇದಾರೆ. ಕನಿಷ್ಠ ವೇತನವನ್ನೂ ಹೆಚ್ಚಳ ಮಾಡಿಲ್ಲ. ನಮ್ಮದೇ ಜಿಲ್ಲೆಯಲ್ಲಿ ದುಡಿಯುತ್ತಿದ್ದರೂ ಹಿಂದಿಯವರ ಕೈ ಕೆಳಗೆ ಕೆಲಸ ಮಾಡಬೇಕಿದೆ. ಜೀವನೋಪಾಯಕ್ಕಾಗಿ ದುಡಿಯಲೇ ಬೇಕಾದ ಪರಿಸ್ಥಿತಿ. ಇದರ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆ ಆಧಾರದ ಮೇಲೆಯು ಕೆಲಸದಿಂದ ತೆಗೆದುಹಾಕಲಾಗುವುದು ಎಂಬ ಬೆದರಿಕೆ ಹಾಕುತ್ತಾರೆ. ಆದ್ದರಿಂದ ದೂರದ ನಗರ ಪ್ರದೇಶಗಳಿಗೆ ಹೋಗಲಾಗದೆ ಅವರು ನೀಡುವ ಕಡಿಮೆ ಸಂಬಳಕ್ಕೆ ಸ್ಥಳಿಯವಾಗಿ ದುಡಿದು ಮನೆಯನ್ನು ನಿಭಾಯಿಸಿಯಬೇಕಾಗಿದೆ

 -ಹೆಸರು ಹೇಳಲು ಇಚ್ಛಿಸದ ನೌಕರ