ಹುಬ್ಬಳ್ಳಿ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರ ಗೋಳು ಕೇಳುವವರಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಡು ಮುಟ್ಟಲಾರದ ತಪ್ಪಲು ಇಲ್ಲ, ಸಿದ್ದರಾಮಯ್ಯ ಬೆಲೆ ಏರಿಸಲಾರದ ವಸ್ತುಗಳಿಲ್ಲ. ಆ ರೀತಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ನಂದಿನಿ ತುಪ್ಪ, ಮೊಸರು ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಜನರು ಹೈರಾಣಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಜಾಗದಲ್ಲಿ ಯಾವುದೇ ಕಾರ್ಯಕ್ರಮ ಪಡೆಯಲು ಅನುಮತಿ ಕಡ್ಡಾಯವೆಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಸ್ಥಳೀಯ ನ್ಯಾಯಾಲಯ ತಡೆಹಿಡಿದಿತ್ತು. ಇದೀಗ ಸವೋಚ್ಛ ನ್ಯಾಯಾಲಯವು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆ. ಇದರಿಂದ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ ಎಂದು ನ್ಯಾಯಾಲಯದ ಆದೇಶವನ್ನು ಶಾಸಕ ಮಹೇಶ ಟೆಂಗಿನಕಾಯಿ ಸ್ವಾಗತಿಸಿದ್ದಾರೆ.
ನೂರು ವರ್ಷಗಳ ಇತಿಹಾಸವುಳ್ಳ ಹಾಗೂ ಸಮಾಜಮುಖಿ ಕಾರ್ಯ ಮಾಡುತ್ತಿರುವ ಆರ್ಎಸ್ಎಸ್ಗೆ ಕಡಿವಾಣ ಹಾಕಲು ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಫಲವಾಗುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಕೋಮು ಗಲಭೆ ನಡೆಸುವ ಶಕ್ತಿಗಳನ್ನು ನಿಷೇಧಿಸುವುದನ್ನು ಬಿಟ್ಟು, ಅವರೆಲ್ಲ ನಮ್ಮ ಬ್ರದರ್ಸ್ ಎನ್ನುವ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಸರ್ಕಾರ ಇನ್ನಾದರೂ ಇಂತಹ ದುಸ್ಸಾಹಸಗಳಿಗೆ ಕೈ ಹಾಕದೇ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲಿ ಎಂದು ಎಚ್ಚರಿಸಿದ್ದಾರೆ.