ಮೈಸೂರು: ಚಾಮುಂಡಿಬೆಟ್ಟ ಧಾರ್ಮಿಕ ಶ್ರದ್ಧಾಕೇಂದ್ರವಾಗಿಯೇ ಉಳಿಯಬೇಕು, ಯಾವುದೇ ಕಾರಣಕ್ಕೂ ಬೆಟ್ಟದಲ್ಲಿ ರೋಪ್‌ವೇ ಯೋಜನೆ ಜಾರಿಗೊಳಿಸಬಾರದು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಧಾರ್ಮಿಕ ತಾಣವಾಗಿರುವ ಚಾಮುಂಡಿಬೆಟ್ಟವನ್ನು ಪ್ರವಾಸಿತಾಣವಾಗಿ ರೂಪಿಸುವುದು ಸರಿಯಲ್ಲ. ರೋಪ್‌ವೇ ಮೂಲಕ ಬೆಟ್ಟದ ಮೇಲ್ಭಾಗಕ್ಕೆ ತೆರಳಿ ನೋಡುವಂತದ್ದು ಏನಿದೆ? ಅಲ್ಲಿ ರಮಣೀಯವಾದ ಜಾಗವೇನು ಇಲ್ಲ. ಜನರು ಬೆಟ್ಟಕ್ಕೆ ಹೋಗುವುದು ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆಯಲು. ಹಾಗಾಗಿ ರೋಪ್‌ವೇ ಯೋಜನೆ ಕೈಗೊಳ್ಳುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೋಪ್‌ವೇ ಯೋಜನೆ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ಮುಂದಾಗಿದ್ದೆವು. ಆದರೆ, ಚಾಮುಂಡಿಬೆಟ್ಟ ಧಾರ್ಮಿಕ ತಾಣವಾಗಿ ಉಳಿಯಲಿ ಎಂಬ ಕಾರಣಕ್ಕೆ ಯೋಜನೆಯನ್ನು ಕೈಬಿಡುವ ನಿರ್ಧಾರ ಕೈಗೊಂಡೆವು. ರೋಪ್‌ವೇ ಮೂಲಕ ಪ್ರವಾಸಿಗರನ್ನು ಸೆಳೆಯುವ ಉದ್ದೇಶವಿದ್ದರೆ ಬೆಂಗಳೂರಿನ ನಂದಿಬೆಟ್ಟ ಅಥವಾ ಚಾಮರಾಜನಗರದಲ್ಲಿ ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಜ.24ರವರೆಗೆ ನಡೆಯಲಿದೆ. ಜನರಿಂದ ಬೇಡಿಕೆ ಬಂದರೆ ಮತ್ತಷ್ಟು ದಿನಗಳವರೆಗೆ ವಿಸ್ತರಿಸಲಾಗುವುದು. ನಗರದ 65 ವಾರ್ಡ್‌ಗಳು ಹಾಗೂ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಯಾತ್ರೆ ಸಾಗಲಿದೆ ಎಂದರು.
ದೇಶದ ಜನರ ಬದುಕಿನಲ್ಲಿ ಬದಲಾವಣೆ ತರುವ ಹಲವಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆ ಎಲ್ಲ ಯೋಜನೆಗಳ ಕುರಿತು ಜನರಿಗೆ ತಿಳಿಸುವ ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪುವಂತೆ ಮಾಡುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಯಾತ್ರೆಯ ಸಂದರ್ಭ ಉಜ್ವಲ-2 ಯೋಜನೆಯಡಿ ಗ್ಯಾಸ್ ಸಂಪರ್ಕ, ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯಕಾರ್ಡ್, ಕಿಸಾನ್ ಸಮ್ಮಾನ್ ಯೋಜನೆಗೆ ರೈತರನ್ನು ನೋಂದಾಯಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.