ಕಮಲಾ ನೆಹರು ಕಾಲೇಜಿನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಆರ್.ಎನ್.ಬಿಂದುಮಣಿ ಉದ್ಘಾಟಿಸಿದರು. ಬಿ.ಕೃಷ್ಣಪ್ಪ, ಡಾ. ಪಿ.ನಾರಾಯಣ್, ಬಿ.ರಂಗಪ್ಪ, ಕೆ.ಆರ್.ಉಮೇಶ್, ನಿರಂಜನ್, ನಂದಿತಾ, ಲೀಲಾವತಿ, ಕೆ.ಪಿ.ಸ್ಫೂರ್ತಿ ಇದ್ದರು.  
ಜಿಲ್ಲೆ

ಸಾಧನೆಗೆ ಹೆಣ್ಣು-ಗಂಡೆಂಬ ಭೇದವಿಲ್ಲ

Shivamogga - Desk - Vinayakumar D B

ಶಿವಮೊಗ್ಗ: ಯಾವುದೇ ಸಾಧನೆಗಳಿಗೆ ಮಹಿಳೆ ಪುರುಷರೆಂಬ ಭೇದಭಾವವಿಲ್ಲ. ಮಹಿಳೆ ಎಂಬ ಅಂಜಿಕೆ ನಮ್ಮಲ್ಲಿರಬಾರದು. ಆಲೋಚನೆಗಳು ಬದಲಾಗಬೇಕಾಗಿದ್ದು ಎಲ್ಲರೂ ಸಮಾನರು ಎಂಬ ಮನೋಭಾವ ನಿಮ್ಮದಾಗಬೇಕು ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಆರ್.ಎನ್.ಬಿಂದುಮಣಿ ಅಭಿಪ್ರಾಯಪಟ್ಟರು.

ನಗರದ ಕಸ್ತೂರ ಬಾ ಬಾಲಿಕಾ ಪಿಯು ಕಾಲೇಜಿನಿಂದ ಬುಧವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿನಿಯರ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ, ಎನ್‌ಎಸ್‌ಎಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧನೆಗೆ ನಿರ್ದಿಷ್ಟ ವ್ಯಾಪ್ತಿಯಿಲ್ಲ. ಒಬ್ಬ ಉತ್ತಮ ನಾಗರಿಕರು ಕೂಡ ಸಮಾಜದ ದೊಡ್ಡ ಸಾಧಕರು. ಕೇವಲ ಇತರರು ಗುರುತಿಸಿದಾಗ ಖ್ಯಾತಿ ಪಡೆದಾಗ ಮಾತ್ರ ನಿಜವಾದ ಸಾಧಕ ಎಂಬ ಭ್ರಮೆ ಬೇಡ. ವಿದ್ಯಾಭ್ಯಾಸದ ಜತೆಗೆ ವ್ಯಕ್ತಿತ್ವ ವಿಕಸನವನ್ನು ರೂಢಿಸಿಕೊಳ್ಳಿ. ಒಳ್ಳೆಯ ಪುಸ್ತಕಗಳ ಅಧ್ಯಯನಗಳನ್ನು ಮಾಡಬೇಕು ಎಂದರು.
ಸಾಮಾಜಿಕ ಜಾಲತಾಣಗಳಿಂದ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಮಹಿಳಾ ಪೊಲೀಸ್ ಠಾಣೆಗಳ ಮೂಲಕ ಯುವತಿಯರು ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶವಿದೆ. ಆತ್ಮಹತ್ಯೆಯೊಂದೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಸಮಸ್ಯೆಗಳನ್ನು ಎದುರಿಸುವ ಆಧಾರದ ಮೇಲೆ ಪರಿಹಾರಗಳು ದೊರೆಯುತ್ತದೆ. ಪೊಲೀಸ್ ಇಲಾಖೆ ಸದಾ ನಾಗರಿಕ ಸ್ನೇಹಿಯಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.
ಡಿಡಿಪಿಯು ಬಿ.ಕೃಷ್ಣಪ್ಪ ಮಾತನಾಡಿ, ಸಾಧಕರ ಮಾತುಗಳು ಯುವಸಮೂಹಕ್ಕೆ ಸಾಧಿಸುವ ಚೈತನ್ಯ ನೀಡುತ್ತದೆ. ಸಮಾಜದಲ್ಲಿನ ಸಾಧಕ ಬಾಧಕಗಳ ಅರಿವು ಪಡೆಯಿರಿ ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿದರು. ಪ್ರಾಚಾರ್ಯ ಬಿ.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಕೆ.ಆರ್.ಉಮೇಶ್, ಉಪನ್ಯಾಸಕರಾದ ನಿರಂಜನ್, ವಿದ್ಯಾರ್ಥಿನಿ ಸಂಘದ ನಂದಿತಾ, ಲೀಲಾವತಿ, ಕೆ.ಪಿ.ಸ್ಫೂರ್ತಿ ಇತರರಿದ್ದರು.