ಶಿವಮೊಗ್ಗದಲ್ಲಿ ಲವ್ ಜಿಹಾದ್ ಪುಸ್ತಕವನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಡುಗಡೆಗೊಳಿಸಿದರು. ಗಂಗಾಧರ್ ಕುಲಕರ್ಣಿ, ಸುಂದ್ರೇಶ್ ನರ್ಗಲ್, ಕೆ.ಇ.ಕಾಂತೇಶ್, ಹಾಲಪ್ಪ ಗೌಡ, ವಾದಿರಾಜ, ಪವಿತ್ರಾ, ಗೀತಾ, ಅಂಬಿಕಾ, ಶೋಭಾ, ಉಷಾ ಇದ್ದರು. 
ಜಿಲ್ಲೆ

ಧರ್ಮಗಳ ನಡುವೆ ಸಂಘರ್ಷ ತಂದಿಡುವ ಉದ್ದೇಶವಿಲ್ಲ

ನವೀನ ಬಿ.ಎಂ

ಶಿವಮೊಗ್ಗ: ಹಿಂದು ಹೆಣ್ಣು ಮಕ್ಕಳಿಗೆ ಮಾರ್ಗದರ್ಶನ, ಧೈರ್ಯ ತುಂಬುವುದು ಹಾಗೂ ಅವರ ಪಾಲಕರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಲವ್ ಜಿಹಾದ್ ಪುಸ್ತಕವನ್ನು ಒಂದು ಲಕ್ಷ ಮರು ಮುದ್ರಣ ಮಾಡಿ ಪ್ರಸಾರ ಮತ್ತು ಪ್ರಚಾರ ಮಾಡಲಾಗುತ್ತಿದೆಯೇ ವಿನಃ ಧರ್ಮ-ಧರ್ಮಗಳ ನಡುವೆ ಸಂಘರ್ಷ ತಂದಿಡುವ ಉದ್ದೇಶವಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಲವ್ ಜಿಹಾದ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುಸ್ಲಿಮರ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಲವ್ ಜಿಹಾದ್ ಒಂದು ಮಾರ್ಗ. ಅದರ ಮೂಲಕ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಜಾಲ, ಷಡ್ಯಂತ್ರ ನಡೆಸಲಾಗುತ್ತಿದೆ. ಅವರದ್ದು ನಿಜವಾದ ಪ್ರೀತಿಯಲ್ಲ. ನಿಜವಾದ ಪ್ರೀತಿ ಆಗಿದ್ದರೆ ಮದುವೆ ಬಳಿಕ ಹೆಣ್ಣು ಮಕ್ಕಳಿಗೆ ಬುರ್ಖಾ ಏಕೆ ಕಡ್ಡಾಯ ಮಾಡುತ್ತಿದ್ದರು? ಮಾಂಸವನ್ನೇಕೆ ತಿನ್ನಲು ಹೇಳುತ್ತಿದ್ದರು? ಹೆಸರೇಕೆ ಬದಲಾವಣೆ ಮಾಡುವರು ಎಂದು ಪ್ರಶ್ನಿಸಿದರು.

ಆರಂಭದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಹೇಳಿದ್ದಕ್ಕೆ ನನ್ನನ್ನೇ ಅಪಮಾನ ಮಾಡಿದ್ದರು. ಅಪಹಾಸ್ಯವನ್ನೂ ಮಾಡಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರೂ ಲವ್ ಜಿಹಾದ್ ಇದೆ ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಹತ್ತಾರು ಲವ್ ಜಿಹಾದ್ ಕೇಸ್‌ಗಳಿವೆ. ಇತ್ತೀಚೆಗೆ ಲವ್ ಜಿಹಾದ್‌ಗೆ ರಾಜ್ಯವೊಂದು ಮರಣದಂಡನೆ ಶಿಕ್ಷೆ ವಿಧಿಸುವ ವಿಧೇಯಕಕ್ಕೆ ಅಸ್ತು ಎಂದಿದೆ ಎಂದು ಮುತಾಲಿಕ್ ಹೇಳಿದರು.

ಸಹಾಯವಾಣಿಗೆ ಸಾವಿರಾರು ಕರೆಗಳು: ಹಿಂದು ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಎಂಬ ಜಾಲದಿಂದ ಹೊರತರಲು ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಸಹಾಯವಾಣಿ ಆರಂಭಿಸಲಾಗಿತ್ತು. ಐವರು ತಜ್ಞರನ್ನೂ ಒಳಗೊಂಡ ತಂಡ ಕಟ್ಟಿಕೊಂಡು ಆರಂಭಿಸಿದ ಸಹಾಯವಾಣಿಗೆ ಒಂದೇ ವಾರದಲ್ಲಿ ಸಾವಿರಕ್ಕೂ ಅಧಿಕ ಕರೆಗಳು ಬಂದಿದ್ದವು. ಅದರಲ್ಲಿ ಶೇ.70ರಷ್ಟು ಹೆಣ್ಣು ಮಕ್ಕಳನ್ನು ರಕ್ಷಿಸಿ ವಾಪಸ್ ಕರೆತಂದಿದ್ದೇವೆ ಎಂದು ಮುತಾಲಿಕ್ ಹೇಳಿದರು.

ದೇಶದಲ್ಲಿ ಕೇವಲ 2 ವರ್ಷದಲ್ಲಿ 13.13 ಲಕ್ಷ ಹೆಣ್ಣು ಮಕ್ಕಳ ಕೇಸ್‌ಗಳು ದಾಖಲಾಗಿವೆ. ಅವುಗಳಲ್ಲಿ ಲವ್ ಜಿಹಾದ್, ಅತ್ಯಾಚಾರ, ಕೊಲೆ, ಅಪಹರಣ, ಮಾರಾಟವೂ ಒಳಗೊಂಡಿದೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಮುಖರಾದ ಸುಂದ್ರೇಶ್ ನರ್ಗಲ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ವಕೀಲರಾದ ಹಾಲಪ್ಪಗೌಡ, ವಾದಿರಾಜ, ಪವಿತ್ರಾ, ಗೀತಾ, ಅಂಬಿಕಾ, ಶೋಭಾ, ಉಷಾ ಉಪಸ್ಥಿತರಿದ್ದರು.