ಜಿಲ್ಲೆ

ಯಾವ ಧರ್ಮದಲ್ಲೂ ದ್ವೇಷ ಸಿದ್ಧಾಂತವಿಲ್ಲ

* ಸರ್ವಧರ್ಮ ಸಮ್ಮೇಳನದಲ್ಲಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿಕೆ

* ಮೂಢನಂಬಿಕೆಗಳಿಂದ ಹೊರ ಬಂದು ಅಭಿವೃದ್ಧಿ ಹಾದಿಯಲ್ಲಿ ಸಾಗೋಣ

ರಾಮನಗರ

ದೇವನೊಬ್ಬ ನಾಮ ಹಲವು ಎಂಬ ಸಂದೇಶವನ್ನು ಯುವ ಜನಾಂಗ ತಿಳಿದುಕೊಳ್ಳಬೇಕು ಎಂದು ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.

ರಾಮನಗರದ ಗುರುಭವನದಲ್ಲಿ ಪಿರಮಿಡ್ ಸ್ಪಿರಿಚ್ಯುಲ್ ಸೊಸೈಟಿಸ್ ಮೂವ್‌ಮೆಂಟ್ ಹಾಗೂ ರಾಮನಗರ ಪಿರಮಿಡ್ ಧ್ಯಾನ ಮಂದಿರದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ಬೆಳವಣಿಗೆ ಅಮೆರಿಕಕ್ಕೂ ಭಯ ಹುಟ್ಟಿಸಿದೆ. 21ನೇ ಶತಮಾನ ಭಾರತೀಯರದಾಗಿದ್ದು, ಎಲ್ಲ ಮತ ಧರ್ಮದ ಯುವಕರು ಮೂಢನಂಬಿಕೆಗಳಿಂದ ಹೊರ ಬಂದು ಅಭಿವೃದ್ಧಿ ಹಾದಿಯಲ್ಲಿ ಸಾಧಿಸಬೇಕಿದೆ. ಧರ್ಮಗಳ ನಡುವೆ ಕಂದಕವನ್ನು ಧರ್ಮ ಸಷ್ಟಿಸುವುದಿಲ್ಲ. ಯಾವ ಮತ ಧರ್ಮವೂ ದ್ವೇಷದ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ. ವ್ಯಕ್ತಿಗಳ ನಡುವಿನ ದ್ವೇಷಗಳನ್ನೇ ಧರ್ಮದ ನಡುವಿನ ದ್ವೇಷಗಳೆಂದು ಬಿಂಬಿಸಲಾಗುತ್ತಿದೆ ಎಂದರು.

ಹರಿಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ನಂಬಿಕೆ, ಮೂಢನಂಬಿಕೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಾಗಿದೆ. ದೇಶದಲ್ಲಿ ಬದಲಾವಣೆ ಆಗಿದ್ದರೂ, ಕಾನೂನು ಇದ್ದರೂ ಅಸ್ಪೃಶ್ಯತೆಯಂತಹ ಆಚರಣೆಗಳನ್ನು ಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ. ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚರಣೆಗೆ ಅವಕಾಶವಿದ್ದು, ಅನಿಷ್ಟ ಪಿಡುಗುಗಳನ್ನು ಸಾಮಾಜಿಕವಾಗಿ ಜನರ ಆಂದೋಲನದ ಮೂಲಕ ದೂರವಿಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇದು ವೆಜ್ಞಾನಿಕ ಕ್ರಾಂತಿಯ ಯುಗ. ಧರ್ಮ ಜಾತಿಗಳ ನಡುವೆ ಉಂಟಾಗಿರುವ ಕಂದಕಗಳನ್ನು ಮುಚ್ಚಿ ಸರ್ವ ಧರ್ಮ ಸಮನ್ವತೆಯಲ್ಲಿ ನಾವು ಮಂದುವರಿಯಬೇಕು. ಇದಕ್ಕೆ ಇಂತಹ ಸರ್ವ ಧರ್ಮ ಸಮ್ಮೇಳನ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.

ಪರಮಾನಂದವಾಡಿಯ ಡಾ. ಶ್ರೀ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಮಾನವನನ್ನು ಸನ್ಮಾರ್ಗದಲ್ಲಿ ನಡೆಸಿ ನಮ್ಮನ್ನು ನಾವು ಅರಿತುಕೊಳ್ಳಲು ನೆರವಾಗುವುದೇ ಧರ್ಮ. ಎಲ್ಲ ಜನರು ಒಂದಾಗಿ ಕರ್ತವ್ಯ ನಿರ್ವಹಿಸುತ್ತಾ, ಎಲ್ಲರ ಏಳಿಗೆಗೆ ಶ್ರಮಿಸಿದರೆ ಅದು ವಿಶ್ವಧರ್ಮವಾಗುತ್ತದೆ. ಸರ್ವ ಧರ್ಮದ ಸದ್ಗುಣಗಳ ಸಾರ ಸೇರಿ ಸರ್ವಧರ್ಮ ಸಮ್ಮಿಲನವಾಗುತ್ತದೆ ಎಂದು ತಿಳಿಸಿದರು.

ವಿಶ್ವದಲ್ಲಿ ಅನೇಕ ಧರ್ಮಗಳಿದ್ದು, ಅವುಗಳ ಆಚರಣೆ, ಕ್ರಿಯೆ, ಸ್ವರೂಪಗಳಲ್ಲಿ ವ್ಯತ್ಯಾಸ, ಆಂತರಿಕ ಭೇದಗಳಿದ್ದರೂ ಅಂತಿಮ ಲಕ್ಷ್ಯ ಮಾತ್ರ ಒಂದೇ. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಅಂತಿಮ ಧ್ಯೇಯ. ಯಾವ ಧರ್ಮವು ಇನ್ನೊಂದು ಧರ್ಮಕ್ಕೆ ತೊಂದರೆ ಕೊಡುತ್ತದೆಯೋ, ಅದು ಧರ್ಮವಲ್ಲ ಎಂದರು.

ಜಮಿಯತ್ ಸದ್ಭಾವನಾ ಮಂಚ್‌ನ ಸದಸ್ಯ ಮೊಹಮ್ಮದ್ ಜಾಫರ್ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ನೆರವಾಗಿ, ಅವರಿಗೆ ಆಶ್ರಯ, ಅನ್ನ, ಉದ್ಯೋಗ ಒದಗಿಸುವುದೇ ಶ್ರೇಷ್ಠ ಧರ್ಮ. ಮಾನವ ಒಂದೋ ವಿಜ್ಞಾನಿಯಾಗಬೇಕು. ಇಲ್ಲವೇ ತತ್ವಜ್ಞಾನಿಯಾಗಬೇಕು. ಆಗ ಮಾತ್ರ ಸರ್ವವನ್ನೂ ಒಪ್ಪಿ ಆಚರಿಸಲು ಸಾಧ್ಯವಾಗುತ್ತದೆ. ಆದರೆ ನಾವಿಂದು ಅಜ್ಞಾನಿಗಳಾಗುತ್ತಾ ವಿನಾಶ ಸಷ್ಟಿಸುತ್ತಿದ್ದೇವೆ ಎಂದರು.

ಬೆಂಗಳೂರಿನ ಬಿಕ್ಕು ದಮ್ಮಾ ತಿಸ್ಸಾ ಮಾತನಾಡಿ, ಧರ್ಮ ಮಾರ್ಗದಿಂದ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ. ಧರ್ಮ ಇರುವುದು ಮನುಷ್ಯನ ಸುಖಕ್ಕಾಗಿ. ಅವರಿಗೆ ಜೀವನದಲ್ಲಿ ಸನ್ಮಾರ್ಗವನ್ನು ತೋರುವುದಕ್ಕಾಗಿ. ಎಲ್ಲ ಧರ್ಮದ ಸಾರವನ್ನು ತಿಳಿದುಕೊಳ್ಳಬೇಕು. ಇಂದು ಜ್ಞಾನವನ್ನು ನೀಡುವ ವಿವಿಧ ಮೂಲಗಳಿವೆ. ಆದರೆ ಅದನ್ನು ಸ್ವೀಕರಿಸುವ ಮನಸ್ಸುಳ್ಳ ಜನರು ಕಡಿಮೆಯಾಗುತ್ತಿದ್ದಾರೆ ಎಂದು ತಿಳಿಸಿದರು.

ಬ್ರಹ್ಮರ್ಷಿ ಪ್ರೇಮನಾಥ್, ಬೆಂಗಳೂರಿನ ಗೋವಿಂದರಾಜು, ಖಾಜಾ ನೂರುಲ್ಲುಷಾ ಅಶ್ರಫ್ ಸೌಭಾಗ್ಯಮ್ಮ, ಗಂಗನರಸಿಂಹಯ್ಯ, ಶಿಕ್ಷಕ ಈರಾನಾಯಕ್, ಸುರೇಶ್ ಕುಮಾರ್ ಇದ್ದರು.

ಧರ್ಮವು ಜನರನ್ನು ಒಗ್ಗೂಡಿಸುವ ದಿವ್ಯ ಶಕ್ತಿಯನ್ನು ಹೊಂದಿದೆ. ಧರ್ಮ ಸಂರಕ್ಷಣೆ ಎಂದರೆ ಸಮಾಜದ ಸಂರಕ್ಷಣೆ. ನಮ್ಮ ಬದುಕಿಗೆ ಬೆಳಕು ನೀಡಿ ದಾರಿ ತೋರಿಸುವ ಸಾಧನವನ್ನು ಧರ್ಮ ಎನ್ನುತ್ತೇವೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಪಿರಮಿಡ್ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಎಲ್ಲರಿಗೂ ಉಚಿತವಾಗಿ ಧ್ಯಾನ ಹೇಳಿಕೊಡಲಾಗುತ್ತಿದೆ. ಒತ್ತಡ ರಹಿತ ಜೀವನ ನಡೆಸಲು ಧ್ಯಾನ ಸಹಕಾರಿಯಾಗಿದೆ.

ಎನ್. ಕೃಷ್ಣಪ್ಪ

ರಾಮನಗರ ಪಿರಮಿಡ್ ಧ್ಯಾನ ಮಂದಿರದ ಸಂಸ್ಥಾಪಕ