ಹುಬ್ಬಳ್ಳಿ: ನನ್ನ ಮಗನಿಗೆ ಟಿಕೆಟ್ ನೀಡಿ ಅಂತ ನಮ್ಮ ಕಾರ್ಯಕರ್ತರ‌್ಯಾರು ಹೇಳಿಲ್ಲ. ನನ್ನ ಮಗ ಸ್ಪರ್ಧೆ ಮಾಡುವ ವಿಚಾರವೇ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಯ ಟಿಕೆಟ್ ಅನ್ನು ನಿಷ್ಠಾವಂತರು, ಕಷ್ಟದಲ್ಲಿದ್ದಾಗ ಪಕ್ಷ ಕಟ್ಟಿದವರಿಗೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಹಂಸರಾಜ ಭಾರದ್ವಾಜ್ ರಾಜ್ಯಪಾಲರಾಗಿದ್ದ ವೇಳೆ ರಾಜಕಾರಣ ಮಾಡುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ದಿನ ಬೆಳಗಾದರೆ ಸಾಕು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು ಎಂದು ಬೊಮ್ಮಾಯಿ ಕಿಡಿಕಾರಿದರು.
ಅಂದು ಬಿಜೆಪಿಗೆ ಬೈಯುತ್ತಿದ್ದ ರಾಜ್ಯಪಾಲರ ಭಾಷೆ, ನಿರ್ಧಾರ ಇಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬೇಕಾಗಿತ್ತು. ಇದೇ ಸ್ಥಿತಿ ಈಗ ಕಾಂಗ್ರೆಸ್‌ಗೆ ಬಂದಾಗ ರಾಜ್ಯಪಾಲರ ಬಗ್ಗೆ ಆರೋಪಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಮಾತನಾಡಿದ ವಿಷಯಗಳ ಕುರಿತು ಭಿನ್ನಾಭಿಪ್ರಾಯವಿದ್ದರೆ ಅದನ್ನು ಕೇಳಲು ರೀತಿ, ನೀತಿಗಳಿವೆ. ಅದರಂತೆ ನಡೆದುಕೊಂಡರೆ ಸರ್ಕಾರಕ್ಕೂ ಗೌರವ ಬರುತ್ತದೆ. ಈ ರೀತಿಯಾಗಿ ಸುಮ್ಮನೆ ಎಲ್ಲೆಂದರಲ್ಲಿ ಆರೋಪ ಮಾಡುವುದು ಸರಿಯಲ್ಲ. ರಾಜ್ಯಪಾಲರನ್ನು ಬಯ್ಯುವುದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ ಎಂದರು.