ಮಡಿಕೇರಿ: ದಾನಗಳಲ್ಲಿ ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎಂದು ಚೆಂಬು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಕುಮಾರ್ ನಂಬಿಯಾರ್ ಹೇಳಿದರು.
ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಇತ್ತೀಚೆಗೆ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಸ್ಕೌಟ್ಸ್ ಮತ್ತು ಗೈಡ್ಸ್ ಚೆಂಬು ಸ್ಥಳೀಯ ಸಂಸ್ಥೆ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಶ್ಲಾಘಿಸಿದ ಅವರು, ನಿವೃತ್ತ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ, ಶುಭಹಾರೈಸಿದರು.
ಕಾರ್ಯಕ್ರಮವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ.ಸಂಪತ್ ಹಾಗೂ ಚೆಂಬು ಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಡಾ.ಯೋಗೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಡಾ.ಸಂಪತ್, ರಕ್ತದಾನ ಮಹತ್ವದ ಕುರಿತು ವಿವರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಡಾ.ಯೋಗೇಶ್ ಅವರು, ರಕ್ತದಾನ ಮಾಡುವುದರಿಂದ ಆಗುವ ಆರೋಗ್ಯದ ಅನುಕೂಲತೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕುದುರೆಪಾಯ ದೇವಿ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಪಾಡಿಕಾನ, ಚೆಂಬು ಗರುಡ ಯುವ ಬಳಗದ ಅಧ್ಯಕ್ಷ ಯಶ್ವಿನ್ ಬಾಲಂಬಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚೆಂಬು ಒಕ್ಕೂಟದ ಉಪಾಧ್ಯಕ್ಷ ಸದಾನಂದ, ನಿವೃತ್ತ ಮುಖ್ಯಶಿಕ್ಷಕರಾದ ದೇಚಮ್ಮ, ಯುಮನಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟಕಿ ಯು.ಎಸ್.ದಮಯಂತಿ, ಚೆಂಬುವಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರಕ್ತದಾನಿಗಳು, ಶಾಲೆಯ ಶಿಕ್ಷಕರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಶಿಬಿರದಲ್ಲಿ ಸುಮಾರು ೨೬ ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಚೆಂಬು ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಗಣಿತ ಶಿಕ್ಷಕ ಕೆ.ಯು.ರಂಜಿತ್ ಅವರನ್ನು ಸ್ಕೌರ್ಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆ ಹಾಗೂ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಮಡಿದವರಿಗೆ ಕಾರ್ಯಕ್ರಮದಲ್ಲಿ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.