ಮೈಸೂರು: ಸರ್ಕಾರದಿಂದ ಕ್ರೀಡೆ ಚಟುವಟಿಕೆಗಳಿಗೆ ಅನುದಾನ ಬಾರದಿದ್ದರೂ ಮೈಸೂರು ವಿಶ್ವವಿದ್ಯಾಲಯವು 1 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.
ಮೈವಿವಿ ದೈಹಿಕ ಶಿಕ್ಷಣ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಮೈವಿವಿ ಕ್ರೀಡಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಈಜುಕೊಳ, ಮೈದಾನಗಳ ಬಾಡಿಗೆಯಿಂದ ವಿವಿಗೆ 25 ಲಕ್ಷ ರೂ. ಮಾತ್ರ ಆದಾಯ ಬರುತ್ತಿದೆ. ವಿದ್ಯಾರ್ಥಿಗಳಿಂದ ಕ್ರೀಡಾ ಶುಲ್ಕ ಕೂಡ ಸರಿಯಾಗಿ ವಸೂಲಾಗುತ್ತಿಲ್ಲ. ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಹಿಂದೆ ವಿವಿಗೆ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿ ಇತ್ತು. ಆದರೆ ಈಗ ಜಿಲ್ಲೆಗೊಂದು ವಿವಿ ಆಗಿರುವುದರಿಂದ ಮೈವಿವಿ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಪ್ರವೇಶಾತಿ ಕುಸಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಚಟುವಟಿಕೆಗಳನ್ನು ರೂಪಿಸಬೇಕು ಎಂದರು.
ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದರು. ಅಲ್ಲದೆ ವಿವಿಯ ಕ್ರೀಡಾಪಟುಗಳ ಸಾಧನೆಯ ಕುರಿತು ದಾಖಲಾತಿ ಮಾಡಬೇಕು. ಇದರಿಂದ ನಾವು ಮಾಡುವ ವೆಚ್ಚದಿಂದ ಯಾವುದೇ ರೀತಿ ಲಾಭವಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.
ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮಾತನಾಡಿ, ಕ್ರೀಡಾ ತಂಡಗಳನ್ನು ಕಳುಹಿಸುವಾಗ, ಮುಂಗಡ ಹಣ ಪಡೆಯುವಾಗಲೂ ನಿಯಮ, ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಅವರು 2023-24 ನೇ ಸಾಲಿನ ಆಯವ್ಯಯದ ಪ್ರಸ್ತಾವನೆ ಮಂಡಿಸಿದರು. ಉಪನಿರ್ದೇಶಕ ಡಾ.ಪಿ.ಕೃಷ್ಣಯ್ಯ ಅವರು ಸಭೆಗೆ ಅಗತ್ಯ ಮಾಹಿತಿ ನೀಡಿದರು.
ಸಿಂಡಿಕೇಟ್ ಸದಸ್ಯರಾದ ಮಹದೇಶ್, ಪ್ರೊ.ಶಬ್ಬೀರ್ ಮೊಹಮ್ಮದ್ ಮುಸ್ತಾಪಾ, ಡಾ.ಜೆ.ಶಿಲ್ಪಾ, ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಎಂ.ಚಂದ್ರಕುಮಾರ್, ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಿ.ವಿ.ಗಣೇಶ್, ಸಮಿತಿಯ ಸದಸ್ಯರಾದ ಪ್ರಾಧ್ಯಾಪಕಿ ಎಚ್.ಎಸ್.ಅಪರ್ಣಾ, ಪಿಎಂಇಬಿ ನಿರ್ದೇಶಕ ಪ್ರೊ.ಎನ್. ನಾಗರಾಜ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇದ್ದರು.