ಜಿಲ್ಲೆ

ರಾಜ್ಯದಲ್ಲಿ ಭ್ರಷ್ಟರಿಗಿಲ್ಲ ಕಾನೂನು ಭಯ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕಾರ್ಯಾಂಗವನ್ನು ಸುತ್ತಿಕೊಂಡಿರುವ ಭ್ರಷ್ಟಾಚಾರ ತೊಲಗಿಸá-ವುದಾಗಿ ರಾಜಕೀಯ ನಾಯಕರು ಉದ್ದುದ್ದ ಭಾಷಣ ಮಾಡುತ್ತಾರಾದರೂ ವಾಸ್ತವ ಬೇರೆಯೇ ಇದೆ. ವಿಪರ್ಯಾಸವೆಂದರೆ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗುವವರ ಪೈಕಿ ಶಿಕ್ಷೆಯಿಲ್ಲದೆ ಖುಲಾಸೆ ಆಗುವವರೇ ಹೆಚ್ಚು!

ಆದಾಯಕ್ಕಿಂತ ಅಧಿಕ ಗಳಿಕೆ, ಲಂಚ ಸ್ವೀಕಾರ ಸೇರಿದಂತೆ ಅನೇಕ ಭ್ರಷ್ಟಾಚಾರ ಪ್ರಕರಣಗಳು ಶಿಕ್ಷೆ ಇಲ್ಲದೆ ಕೋರ್ಟ್​ಗಳಲ್ಲಿ ಖುಲಾಸೆಗೊಳ್ಳುತ್ತಿವೆ. ದೇಶದಲ್ಲಿ ದಾಖಲಾದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶೇ.44.3ರಲ್ಲಿ ಶಿಕ್ಷೆ ಆಗಿದ್ದರೆ ಕರ್ನಾಟಕದಲ್ಲಿ ಈ ಪ್ರಮಾಣ ಶೇ.24.5 ಮಾತ್ರ. ಭ್ರಷ್ಟಾಚಾರ ನಿಮೂಲನೆ ನಿಟ್ಟಿನಲ್ಲಿ ಕಾನೂನು ಬಿಗಿ ಜತೆಗೆ ಅದನ್ನು ಜಾರಿಗೊಳಿಸುವ ಸಂಸ್ಥೆಗಳನ್ನು ಬಲಪಡಿಸುವುದು ಮುಖ್ಯವೆಂಬುದು ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ(ಎನ್​ಸಿಆರ್​ಬಿ) ವರದಿಯ ಅಂಕಿ ಅಂಶಗಳಿಂದ ಮನದಟ್ಟಾಗುತ್ತದೆ.

ಕೇವಲ 1 ಪ್ರಕರಣ ಏರಿಕೆ

2019ರಲ್ಲಿ ದೇಶಾದ್ಯಂತ ದಾಖಲಾದ 4243 ಪ್ರಕರಣಗಳ ಪೈಕಿ 2699ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ 928 ಪ್ರಕರಣಗಳಲ್ಲಷ್ಟೇ ಆರೋಪಿಗಳಿಗೆ ಶಿಕ್ಷೆಯಾಗಿದೆ. 1121 ಪ್ರಕರಣ ವಜಾಗೊಂಡಿವೆ. ರಾಜ್ಯದಲ್ಲಿ 2018ರಲ್ಲಿ 378 ಪ್ರಕರಣ ದಾಖಲಾಗಿದ್ದರೆ 2019ರಲ್ಲಿ ಕೇವಲ ಒಂದು ಪ್ರಕರಣ ಏರಿಕೆ ಕಂಡಿದೆ. ಕೇವಲ 50 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 143 ಪ್ರಕರಣ ವಜಾಗೊಂಡಿವೆ. 216 ಪ್ರಕರಣಗಳನ್ನು ಕೋರ್ಟ್ ಇತ್ಯರ್ಥಗೊಳಿಸಿದೆ. ಶೇ.87.7 ಪ್ರಕರಣಗಳು ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿ ಇರುವುದು ಎನ್​ಸಿಆರ್​ಬಿ ವರದಿಯಿಂದ ತಿಳಿದುಬಂದಿದೆ.

ಕರ್ನಾಟಕಕ್ಕೆ ಆರನೇ ಸ್ಥಾನ

ಕಳೆದ 3 ವರ್ಷಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳು ಸ್ವಲ್ಪವಷ್ಟೇ ಹೆಚ್ಚಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ದೂರು ಕೊಡಲು ಹಿಂದೇಟು ಅಥವಾ ಪ್ರಕರಣ ದಾಖಲಿಸದಿರುವುದರಿಂದಲೂ ಪ್ರಕರಣಗಳ ಸಂಖ್ಯೆ ಏರಿಕೆ ಆಗದೆ ಇರಬಹುದು. ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇರುವುದು ಆತಂಕಕಾರಿ ವಿಚಾರವಾಗಿದೆ. ಪ್ರಕರಣ ಏರಿಕೆಯಲ್ಲಿ ದೇಶದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಮಹಾರಾಷ್ಟ್ರ(ಶೇ.21), ರಾಜಸ್ಥಾನ ಶೇ.10.1 ಮತ್ತು ತಮಿಳುನಾಡು ಶೇ.9.9 ಪ್ರಮಾಣದೊಂದಿಗೆ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನದಲ್ಲಿವೆ.

ಶಿಕ್ಷೆ ತಪ್ಪಲು ಕಾರಣ

  • ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸಿರುವುದು
  • ತನಿಖೆ ವೇಳೆ ಸಾಕ್ಷ್ಯಾಧಾರಗಳನ್ನು ಬಲಗೊಳಿಸದಿರುವುದು
  • ದೂರುದಾರ, ಸಾಕ್ಷಿದಾರರಿಗೆ ಬೆದರಿಕೆ ಅಥವಾ ಹಣದ ಆಮಿಷ
  • ಕೋರ್ಟ್ ವಿಚಾರಣೆಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲ
  • ಎಫ್​ಎಸ್​ಎಲ್ ವರದಿ ಶೀಘ್ರ ತನಿಖಾಧಿಕಾರಿ ಕೈಸೇರದಿರುವುದು
  • ಕೋರ್ಟ್​ನಿಂದ ಹೊರಗೆ ರಾಜೀ ಸಂಧಾನ, ದೂರುದಾರ, ಸಾಕ್ಷಿಗಳನ್ನು ಕೋರ್ಟ್​ಗೆ ಕರೆತರುವಲ್ಲಿ ತನಿಖಾಧಿಕಾರಿ ವಿಫಲ
  • ತನಿಖಾಧಿಕಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸದಿರುವುದು

ಬಲೆಗೆ ಬಿದ್ದವರೇ ಹೆಚ್ಚು ಮಂದಿ

2019ರಲ್ಲಿ ರಾಜ್ಯದಲ್ಲಿ ದಾಖಲಾಗಿರುವ 379 ಭ್ರಷ್ಟಾಚಾರ ಪ್ರಕರಣಗಳ ಪೈಕಿ 252 ಟ್ರಾ್ಯಪ್ ಪ್ರಕರಣಗಳು. ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ(15), ಅವ್ಯವಹಾರ(30) ಮತ್ತು ಇತರ 82 ಪ್ರಕರಣ ದಾಖಲಾಗಿವೆ. ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸಿದ ಬಳಿಕ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಾತ್ರ ಲಂಚ ಪ್ರಕರಣಗಳ ತನಿಖೆಕೈಗೊಂಡಿದೆ. ದೇಶದಲ್ಲಿ 4,243 ಪ್ರಕರಣಗಳಲ್ಲಿ 2,873 ಟ್ರಾ್ಯಪ್ ಪ್ರಕರಣಗಳೇ ಆಗಿವೆ. ಆದಾಯಕ್ಕಿಂತ ಹೆಚ್ಚು ಅಧಿಕ ಆಸ್ತಿಗಳಿಕೆ ಸಂಬಂಧ 357 ಕೇಸ್ ದಾಖಲಾಗಿವೆ.

34 ಮಂದಿಗೆ ಅಲ್ಪ ಪ್ರಮಾಣದ ಶಿಕ್ಷೆ

2019ರಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ 605 ಆರೋಪಿಗಳ ಪೈಕಿ 53 ಮಂದಿಗೆ ಶಿಕ್ಷೆಯಾಗಿದೆ. ಆದರೆ, ಇಲಾಖಾ ತನಿಖೆ ಬಳಿಕವೂ ಯಾವ ಆರೋಪಿಗಳನ್ನೂ ಸೇವೆಯಿಂದ ವಜಾ ಮಾಡಿಲ್ಲ. 19 ಮಂದಿಗೆ ಮಾತ್ರ ಅಧಿಕ ಪ್ರಮಾಣದಲ್ಲಿ ಶಿಕ್ಷೆಯಾಗಿದ್ದು, ಉಳಿದ 34 ಮಂದಿಗೆ ಅಲ್ಪಪ್ರಮಾಣದ ಶಿಕ್ಷೆ ಕೊಟ್ಟು ಮತ್ತೆ ಸೇವೆ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.