ಜಿಲ್ಲೆ

ಜಿಲ್ಲೆಯಲ್ಲಿಲ್ಲ ಹಕ್ಕಿ ಜ್ವರದ ಆತಂಕ

* ಮುಂಜಾಗ್ರತಾ ಕ್ರಮ ಕೈಗೊಂಡ ಇಲಾಖೆ

* ಸಾರ್ವಜನಿಕರಲ್ಲಿ ಇರಲಿ ಎಚ್ಚರ

ಗಂಗಾಧರ್ ಬೈರಾಪಟ್ಟಣ ರಾಮನಗರ

ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ಆತಂಕ ಪಡುವ ಅಗತ್ಯ ಇಲ್ಲ.

ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ನಮ್ಮ ರಾಜ್ಯದ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರಕ್ಕೂ ಹಕ್ಕಿಜ್ವರ ವೈರಸ್ ಕಾಲಿಟ್ಟಿರುವುದು ಆತಂಕ ಮನೆ ಮಾಡುವಂತೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 318 ಪೌಲ್ಟ್ರಿ ಫಾರಂಗಳಿದ್ದು, ಸುಮಾರು 27 ಲಕ್ಷ ಕೋಳಿಗಳ ಸಾಕಣೆ ನಡೆಯುತ್ತಿದೆ.

ಈ ಹಿಂದೆ ಹಲವು ಬಾರಿ ಹಕ್ಕಿಜ್ವರ ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ರಾಮನಗರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೂ, ಮತ್ತೆ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಈಗಾಗಲೇ ಕೋಳಿ ಸಾಕಣಿಕೆದಾರರಿಗೆ ಸೂಚನೆ ನೀಡಲಾಗಿದ್ದು, ಕೋಳಿಗಳ ಅಸಹಜ ಸಾವು ಕಂಡು ಬಂದ ತಕ್ಷಣ ತಮ್ಮ ಹತ್ತಿರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುತ್ತಿದೆ.

ಲಕ್ಷಣಗಳು ಏನು?

ಸಾಮಾನ್ಯವಾಗಿ ಹಕ್ಕಿಜ್ವರ ಕಂಡುಬಂದರೆ ಕೋಳಿಗಳಲ್ಲಿ ಚಟುವಟಿಕೆ ಕಡಿಮೆಯಾಗುವುದು. ಆಹಾರ ಸೇವನೆ ಇಳಿಮುಖ, ಕೋಳಿಗಳಲ್ಲಿ ಕಾವು ನೀಡುವ ಬಯಕೆ ಹೆಚ್ಚಾಗುವುದು. ಮೊಟ್ಟೆ ಇಡುವ ಸಂಖ್ಯೆಯಲ್ಲಿ ಇಳಿಮುಖ, ಮೃದುವಾದ ಮೊಟ್ಟೆಯನ್ನಿಡುವುದು. ಕೆಮ್ಮು, ಸೀನು ಉಸಿರಾಡುವಾಗ ಗೊರಗೊರ ಸದ್ದು, ಕಣ್ಣೀರು ಸುರಿಯುವಿಕೆ, ಮುದುರಿಕೊಳ್ಳುವುದು, ನಲುಗಿದ ರೆಕ್ಕೆಗಳು, ತಲೆ ಮತ್ತು ಮುಖದ ನೀರೂತ, ಚರ್ಮದ ನೀಲಿಗಟ್ಟುವಿಕೆ, ನರಗಳ ಅಸ್ವಸ್ತತೆ, ಅತೀ ಬೇದಿ ಹಾಗೂ ಕೆಲವು ಪ್ರಕರಣಗಳಲ್ಲಿ ರೋಗ ಶೀಘ್ರವಾಗಿ, ವಿಷಕಾರಿಯಾಗಿ ಕೋಳಿ, ಹಕ್ಕಿಗಳು ಪೂರ್ವ ಚಿಹ್ನೆಗಳಿಲ್ಲದೆ ಅಸಾಧಾರಣವಾಗಿ ಸಾಯುವುದು ಕಂಡು ಬರುತ್ತದೆ.

ಮುನ್ನೆಚ್ಚರಿಕೆವಹಿಸಿ?

ದೊಡ್ಡ ಮಟ್ಟದಲ್ಲಿ ಕೋಳಿ ಸಾಕುತ್ತಿರುವ ಮತ್ತು ಮನೆಯಲ್ಲಿಯೇ ಕೋಳಿ ಸಾಕಣೆ ಮಾಡುತ್ತಿರುವವರು ಪ್ರಸ್ತುತ ಸಂದರ್ಭದಲ್ಲಿ ಮುನ್ನೆಚ್ಚರಿಕೆವಹಿಸುವ ಅಗತ್ಯವಿದೆ. ಸದ್ಯಕ್ಕೆ ಹಕ್ಕಿಜ್ವರ ಜಿಲ್ಲೆಗೆ ಕಾಲಿಟ್ಟಿಲ್ಲವಾದರೂ ಹಕ್ಕಿಜ್ವರ ತಡೆಯಲು ಬೇರೆ ಹಕ್ಕಿಗಳು ಮತ್ತು ಪ್ರಾಣಿಗಳು ಫಾರಂನಲ್ಲಿರುವ ಕೋಳಿಗಳ ಸಂಪರ್ಕಕ್ಕೆ ಜಾರದಂತೆ ಜಾಗ್ರತೆ ವಹಿಸಬೇಕು. ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು, ಫಾರಂನಲ್ಲಿ ಕೆಲಸ ಮಾಡುವವರು ಮಾತ್ರ ಫಾರಂಗಳಿಗೆ ಭೇಟಿ ನೀಡಬೇಕು. ಇದರಿಂದ ಹೊರಗಿನ ಸೋಂಕು ಕೋಳಿಗಳಿಗೆ ತಗಲುವುದನ್ನು ತಪ್ಪಿಸಬಹುದು.

ಇದರ ಜತೆಗೆ ಕೆಲಸಗಾರರು ಪೌಲ್ಟ್ರಿ ಫಾರಂ ಒಳ ಹೋಗುವ ಮೊದಲು ಹಾಗೂ ಕೆಲಸ ನಿರ್ವಸಿದ ನಂತರ ಕೈ, ಕಾಲು, ಬಟ್ಟೆಗಳನ್ನು ನಂಜುನಾಶಕ ದ್ರಾವಣದಿಂದ ತಪ್ಪದೇ ಶುಚಿಗೊಳಿಸಬೇಕು. ಸಾಕಣೆಗೆ ಉಪಕರಣಗಳನ್ನು ಅಥವಾ ವಸ್ತುಗಳನ್ನು ಬೇರೆ ಫಾರಂನಿಂದ ಎರವಲು ಪಡೆಯಬೇಕಾದರೆ ನಂಜುನಾಶಕ ದ್ರಾವಣದಿಂದ ಶುಚಿಗೊಳಿಸಿ ಬಳಸಬೇಕು. ಕೋಳಿ ಪಂಜರಗಳನ್ನು ದಿನನಿತ್ಯ ಶುಚಿಗೊಳಿಸುವುದು ಮತ್ತು ಆಹಾರ ಹಾಗೂ ನೀರನ್ನು ಪ್ರತಿದಿನ ಬದಲಾಯಿಸಬೇಕು. ಒಂದು ವೇಳೆ ಯಾವುದೇ ಕೋಳಿ ಅಸಹಜವಾಗಿ ಇರುವುದು ಕಂಡು ಬಂದರೆ ಅಂತಹ ಕೋಳಿಯನ್ನು ಗುಂಪಿನಿಂದ ಬೇರ್ಪಡಿಸಬೇಕು. ಇದರ ಜತೆಗೆ ಕೋಳಿಗಳ ಅಸಾಧಾರಣವಾಗಿ ಸಾಯುವುದು ಕಂಡು ಬಂದರೆ ತಡ ಮಾಡದೇ ಪಶುವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು.

ಗಡಿಯಲ್ಲಿ ಕಟ್ಟೆಚ್ಚರ ಅಗತ್ಯ

ರಾಮನಗರ ಜಿಲ್ಲೆ ನೆರೆಯ ತಮಿಳುನಾಡಿನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಮಿಳುನಾಡಿ ಗಡಿ ಭಾಗದಲ್ಲಿ ಕೋಳಿ ಸಾಕಣಿಕೆಯ ಬಗ್ಗೆ ಬಗ್ಗೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ಹಕ್ಕಿಜ್ವರದಿಂದ ಕೋಳಿಗಳ ಸಾವು ಸಂಭವಿಸಿದಾಗ ಜೀವಂತ ಕೋಳಿಗಳನ್ನು ಕಡಿಮೆ ಬೆಲೆಯಲ್ಲಿ ಗಡಿಭಾಗಗಳಲ್ಲಿ ಅಪರಿಚಿತರು ಮಾರಾಟ ಮಾಡುವ ಸಂಭವವಿರುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಕೋಳಿ ಮಾಂಸ ಮಾರಾಟ ಮಾಡುವ ಸಾಧ್ಯತೆ ಇದ್ದು, ಇದರ ಬಗ್ಗೆಯೂ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಕೂಡಲೇ ಪೌಲ್ಟ್ರಿಂ ಪಾರಂ ಮಾಲೀಕರ ಸಭೆಯನ್ನು ಕರೆದು ಅವರಿಗೆ ತಿಳಿವಳಿಕೆ ನೀಡುವ ಕೆಲಸ ಇಲಾಖೆ ಮಾಡಬೇಕಿದೆ.

ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪೌಲ್ಟ್ರಿಂ ಫಾರಂ ಮಾಲೀಕರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಕೋಳಿಗಳಲ್ಲಿ ಅಸಾಧಾರಣ ಸಾವು ಕಂಡು ಬಂದರೆ ತಕ್ಷಣವೇ ಹತ್ತಿರದ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕು.

ಡಾ.ಅಸಾದುಲ್ಲಾ ಷರೀಫ್,

ಉಪನಿರ್ದೇಶಕರು, ಪಶುವೈದ್ಯಕೀಯ ಸೇವೆಗಳ ಇಲಾಖೆ,ರಾಮನಗರ.