ಜಿಲ್ಲೆ

ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:: ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾವೆಲ್ಲ ಒಂದಾಗಿ ಇದ್ದೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಗುರುವಾರ ಹುಬ್ಬಳ್ಳಿ ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರಧಾನಿ ಅವರ ದೂರದೃಷ್ಟಿ, ಅಭಿವೃದ್ಧಿ ಚಿಂತನೆಯಡಿ ಕೆಲಸ ಮಾಡುತ್ತಿದ್ದೇವೆ. ಇದರ ನಡುವೆ ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಏನಾದರೂ ಇದ್ದಲ್ಲಿ ನನಗೆ ಗೊತ್ತಿಲ್ಲ ಎಂದರು.

ಸಿಎಂ ಆಗಲು ಸಾವಿರ ಕೋಟಿ ರೂ. ಇಟ್ಟಿರುವ ಮಹಾನ್ ನಾಯಕ ಯಾರೂ ಎಂಬುದು ನನಗೆ ಖಂಡಿತವಾಗಿಯೂ ಗೊತ್ತಿಲ್ಲ. ಶಾಸಕ ಬಸನಗೌಡ ಪಾಟೀಲ ಯಾಕೆ ಹೀಗೆ ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ. ಯಾರ ಮೇಲಾದರೂ ಸಿಟ್ಟಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ರ್ಚಚಿಸಿ ಬಗೆಹರಿಸಿಕೊಳ್ಳಬೇಕು. ಅನಾವಶ್ಯಕವಾಗಿ ಪಕ್ಷಕ್ಕೆ ಮುಜಗರವಾಗುವ ರೀತಿಯಲ್ಲಿ ಯಾರೂ ಮಾತನಾಡಬಾರದು ಎಂದು ಹೇಳಿದರು.

ಸಚಿವ ದಿನೇಶ ಗುಂಡೂರಾವ್, ಮಾಜಿ ಸಿಎಂ ಗುಂಡೂರಾವ್ ಅವರ ಪುತ್ರರಾಗಿರುವ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ವೀರ ಸಾವರಕರ್ ಬಗ್ಗೆ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ದಿನೇಶ ಗುಂಡುರಾವ್ ಇತಿಹಾಸ ತಿಳಿದುಕೊಂಡು ಮಾತನಾಡಲಿ ಎಂದರು.

ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ, ಕಾಲು, ಬಾಯಿ ಗಾಯ ಮಾಡಿಕೊಂಡಿದ್ದಾರೆ. ಒಂದು ತಪ್ಪು ಮುಚ್ಚಲು ಹೋಗಿ 50 ತಪ್ಪುಗಳನ್ನು ಮಾಡಿದ್ದಾರೆ. ಅಧಿವೇಶನದಲ್ಲಿಯೇ ತಪ್ಪು ಒಪ್ಪಿಕೊಳ್ಳಬೇಕಿತ್ತು. ಸಿದ್ದರಾಮಯ್ಯ ಹಾಗೂ ನಾನು ಜನತಾ ಪರಿವಾರದಿಂದ ಬಂದವರು. ಅವರು ತಾವು ನಡೆದು ಬಂದ ದಾರಿ ನೆನಪು ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅವರು ಮಾದರಿ ರಾಜಕಾರಣಿ ಎಂದಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಇತಿಹಾಸದಲ್ಲಿ ಉಳಿದುಕೊಳ್ಳಲಿ. ನ್ಯಾಯಾಲಯದ ತೀರ್ಪಿನ ಬಳಿಕವೂ ಮುಖ್ಯಮಂತ್ರಿಯಾಗಿ ಮುಂದುವರಿದಿರುವುದು ಅವರಂಥ ನಾಯಕರಿಗೆ ಶೋಭೆ ತರುವಂಥದ್ದಲ್ಲ ಎಂದು ಟೀಕಿಸಿದರು.