ಜಿಲ್ಲೆ

ಕೈಗಾರಿಕೆಗಳಲ್ಲಿ ಕಾರ್ಮಿಕರ ಸುರಕ್ಷತೆಗಿಲ್ಲ ಒತ್ತು

ಕೋಲಾರ ಡೆಸ್ಕ್

ಎನ್​.ಮುನಿವೆಂಕಟೇಗೌಡ ಕೋಲಾರ: ಜಿಲ್ಲೆಯ ನರಸಾಪುರ, ವೇಮ್​ಗಲ್​ ಕೈಗಾರಿಕಾ ಪ್ರಾಂಗಣದಲ್ಲಿ ತಲೆ ಎತ್ತಿರುವ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕೆಲಸದ ವೇಳೆ ಭದ್ರತೆ, ಓಡಾಡಲು ಸಾರಿಗೆ ವ್ಯವಸ್ಥೆ ಇಲ್ಲದೆ ನಿತ್ಯ ಕೆಲಸಗಳಿಗೆ ಹೋಗುವವರು ಸಂಕಷ್ಟ ಅನುಭವಿಸುವಂತಾಗಿದೆ.

ನರಸಾಪುರ ಮತ್ತು ವೇಮಗಲ್​ ಸುತ್ತಮುತ್ತ ತಲೆ ಎತ್ತಿರುವ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಕಾರ್ಮಿಕರೂ ಇದ್ದು, ಭದ್ರತೆ ಇಲ್ಲದಂತಾಗಿದೆ.

ಕೈಗಾರಿಕಾ ಪ್ರಾಂಗಣದಲ್ಲಿ ಖಾಸಗಿ ಟೆಂಪೋ, ಟ್ಯಾಕ್ಸಿ, ಆಟೋಗಳ ಅವಲಂಬನೆಯೇ ಹೆಚ್ಚಾಗಿದ್ದು, ಯಾವುದೇ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲದೆ ದುಡಿದ ಹಣವನ್ನು ಖಾಸಗಿ ವಾಹನಗಳಿಗೆ ನೀಡುವಂತಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಟೆಂಪೋ ಮತ್ತು ಟ್ಯಾಕ್ಸಿಯವರು ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬುದು ಕಾರ್ಮಿಕರ ಅಳಲು.

ಉತ್ತರ ಭಾರತದಿಂದ ಅನೇಕ ಮಹಿಳೆಯರು ಕಾರ್ಖಾನೆಗಳಲ್ಲಿದ್ದಾರೆ. ಅವರಿಗೆ ಭಾಷೆ ಬರದಿರುವುದು, ಕಡಿಮೆ ಸಂಬಳಕ್ಕೆ ದುಡಿದು ವಸತಿ ಸೌಲಭ್ಯಕ್ಕೂ ಹುಡುಕಾಡುವ ಪರಿಸ್ಥಿತಿ ನಿಮಾರ್ಣವಾಗಿದೆ. ಇದನ್ನೇ ಕೆಲವು ಸ್ಥಳಿಯರು ನೆಪ ಮಾಡಿಕೊಂಡು ವಲಸೆ ಕಾರ್ಮಿಕರಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಕಾರ್ಮಿಕರ ಘರ್ಷಣೆ

ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಧ್ಯೆ ಇತ್ತೀಚೆಗೆ ಘರ್ಷಣೆಗಳು ಹೆಚ್ಚಾಗಿವೆ. ಶ್ರೀನಿವಾಸಪುರದ ಜ್ಯೂಸ್​ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ಕಾರ್ಮಿಕನ ಕೊಲೆ, ನರಸಾಪುರದ ಬಳಿಯ ಖಾಸಗಿ ಬಾಡಿಬಿಲ್ಡರ್​ ಕಂಪನಿಯಲ್ಲಿ ಬಸ್ಸಿನ ಮೇಲಿಂದ ಬಿದ್ದು ಕಾರ್ಮಿಕ ಸಾವು ಹೀಗೆ ಹಲವು ಕಾರ್ಖಾನೆಗಳಲ್ಲಿ ನಾನಾ ಕಾರಣಗಳಿಗಾಗಿ ಕಾರ್ಮಿಕರ ಸಾವು ಸಂಭವಿಸುತ್ತಿವೆ. ಗಲಾಟೆ ನಂತರದಲ್ಲಿ ಆಯಾ ಕಾರ್ಮಿಕರ ರಾಜ್ಯಗಳಿಗೆ ಕಾರ್ಖಾನೆಯ ವ್ಯವಸ್ಥಾಪಕರು, ಯಾವುದೇ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇಲ್ಲದಂತೆ ರವಾನಿಸಿದ್ದಾರೆ ಎಂದು ಕಾರ್ಮಿಕರೇ ಬಾಯಿ ಬಿಡುತ್ತಿದ್ದಾರೆ. ಬಹಿರಂಗವಾಗಿ ದೂರು ನೀಡಿದರೆ ನನ್ನ ಕೆಲಸವೂ ಹೋಗುತ್ತದೆಂದು ಕಾರ್ಮಿಕರು ಹಿಂಜರಿಯುತ್ತಿದ್ದಾರೆ.

"ಖಾಸಗಿ ಕಂಪನಿಯಲ್ಲಿ ಕಾರ್ಮಿಕ ಮೃತಪಟ್ಟಿದ್ದಾನೆ. ಕಂಪನಿ ಬಗ್ಗೆ ದೂರು ದಾಖಲಾಗಿದೆ. ಇತರ ಕಾರ್ಖಾನೆಗಳಲ್ಲಿ ಸಂಘರ್ಷದಿಂದ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ವರದಿ ಬಂದಿಲ್ಲ. ಕಾರ್ಖಾನೆಗಳಲ್ಲಿ ಭದ್ರತೆ ಒದಗಿಸುವುದು, ಸ್ವಚ್ಛತೆ, ಪಿಎಫ್​ ಮತ್ತು ಇಎಫ್​ ಸೇರಿ ಇತರ ಸೌಲಭ್ಯ ಒದಗಿಸುವುದು ನಮ್ಮ ಇಲಾಖೆ ಜವಾಬ್ದಾರಿ. ಕಾರ್ಖಾನೆಯಿಂದ ಹೊರಗೆ ಘರ್ಷಣೆಯಾದರೆ ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಸಾರಿಗೆ ವ್ಯವಸ್ಥೆ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಇದೆ. ಸಣ್ಣ ಕಾರ್ಖಾನೆಗಳಲ್ಲಿ ಸಾರಿಗೆ ಭತ್ಯೆ ನೀಡಲಾಗುತ್ತಿದೆ. ಸಾರಿಗೆ ವ್ಯವಸ್ಥೆ ಅವರೇ ಮಾಡಿಕೊಡಬೇಕಾಗುತ್ತದೆ. ರ್ಷಣೆ ಕುರಿತು ನಿಗಾ ವಹಿಸಲಾಗುವುದು."

> -ನರಸಿಂಹಮೂರ್ತಿ

ಕಾರ್ಖಾನೆ ಮತ್ತು ಬಾಯ್ಲರ್ಸ್​ ಇಲಾಖೆ ಅಧಿಕಾರಿ

"ಕಾರ್ಮಿಕರ ಸಂಬಳದಲ್ಲಿ ವ್ಯತ್ಯಾಸ ಮತ್ತು ಕಡಿಮೆ ಹಣ ನೀಡುವುದು ಕಂಡು ಬಂದರೆ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡಿದರೆ ಇಲಾಖೆಯ ಗಮನಕ್ಕೆ ತರಬೇಕು. ಮೂಲ ಸೌಲಭ್ಯಗಳ ಕೊರತೆ ಹಾಗೂ ಇತರ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಇದ್ದು, ಅವರ ಬಳಿ ಕಾರ್ಮಿಕರು ಸಮಸ್ಯೆ ಹೇಳಿಕೊಳ್ಳಬೇಕು. ಆದರೂ ನಮ್ಮ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ಆಲಿಸಲಾಗುವುದು."

> -ವರಲಕ್ಷ್ಮೀ

ಜಿಲ್ಲಾ ಕಾರ್ಮಿಕಾಧಿಕಾರಿ, ಕೋಲಾರ

"ಕಾರ್ಮಿಕರ ಮಧ್ಯೆ ಘರ್ಷಣೆ ಹಾಗೂ ಸ್ಥಳಿಯರ ಕಿರುಕುಳದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ರಾತ್ರಿ ಪಾಳಿಯಲ್ಲಿ ಸಾರಿಗೆ ವ್ಯವಸ್ಥೆ, ಭದ್ರತೆ ಬಗ್ಗೆ ಪರಿಶೀಲಿಸಲಾಗುವುದು. ಇಲ್ಲಿನ ಕರ್ತವ್ಯಕ್ಕೆ ನಿಯೋಜನೆಗೊಂಡು ಒಂದು ತಿಂಗಳಾಗಿದ್ದು, ಕೈಗಾರಿಕಾ ಪ್ರಾಂಗಣದಲ್ಲಿನ ಅವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವುದು."

> -ಬಿ.ಪಿ.ಮಂಜುನಾಥ್​

ವೃತ್ತ ನಿರೀಕ್ಷಕ, ವೇಮಗಲ್​ ಪೊಲೀಸ್​ ಠಾಣೆ