ಆರ್.ತುಳಸಿಕುಮಾರ್
ಬೆಂಗಳೂರು: ರಾಜಧಾನಿಯ ಬೆಳವಣಿಗೆ ಗಮನಿಸಿ ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯವಿದೆ ಎಂಬ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ ವಾರದೊಳಗೆ, ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹೊಸೂರಿನಲ್ಲಿ ಜಾಗತಿಕ ಮಟ್ಟದ ಏರ್‌ಪೋರ್ಟ್ ನಿರ್ಮಿಸುವ ಘೋಷಣೆ ಐಟಿ ನಗರಿಯಲ್ಲಿ ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ.
ಬೆಂಗಳೂರಿನ ಸನಿಹದಲ್ಲಿರುವ ಹೊಸೂರಿನಲ್ಲಿ ನೂತನ ಏರ್‌ಪೋರ್ಟ್ ಬಂದಲ್ಲಿ ಅದರಿಂದ ಉದ್ಯಾನ ನಗರಿಯ ಬೆಳವಣಿಗೆ ಮೇಲೆ ಏನು ಪರಿಣಾಮ ಬೀರಬಹುದು ಎಂಬ ಚರ್ಚೆ ಜನಪ್ರತಿನಿಧಿಗಳು ಹಾಗೂ ಉದ್ಯಮ ವಲಯದಲ್ಲಿ ಆರಂಭವಾಗಿದೆ. ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೆಂಗಳೂರು ತನ್ನದೇಯಾದ ಪ್ರಭಾವವನ್ನು ಹೊಂದಿದೆ. ದೇಶದ ಐಟಿ ರಾಜಧಾನಿ ಎಂದೇ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತನ್ನ ಸೇವೆಯಿಂದ ವಿಶ್ವದೆಲ್ಲೆಡೆ ಸದ್ದು ಮಾಡಿದೆ. ಈ ಹಂತದಲ್ಲಿ ನೆರೆಯ ರಾಜ್ಯದ ಸಿಎಂ ನೀಡಿರುವ ಹೇಳಿಕೆ ಕುತೂಹಲ ಕೆರಳಿಸಿದೆ.
ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ಹೊಸೂರು ಕೈಗಾರಿಕೆ ಹಬ್ ಆಗಿ ಪರಿವರ್ತನೆಗೊಂಡಿದೆ. ಇದಕ್ಕೆ ಪೂರಕ ವಾತಾವರಣ ಕಲ್ಪಿಸುವ ಸಲುವಾಗಿ ಆ ರಾಜ್ಯವು ಎರಡನೇ ಹಂತದ ನಗರಗಳನ್ನು ಕೇಂದ್ರೀಕರಿಸುತ್ತಿದೆ. ಇದಕ್ಕೆ ಪೂರಕವಾಗಿ ಉದ್ದಿಮೆದಾರರಿಂದ ಹೂಡಿಕೆ ಆಕರ್ಷಿಸುವ ಸಲುವಾಗಿ ದೊಡ್ಡ ಮಟ್ಟದ ಮೂಲಸೌಕರ್ಯ ಕಲ್ಪಿಸುವ ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ಇದರ ಭಾಗವಾಗಿ ಎಂ.ಕೆ.ಸ್ಟಾಲಿನ್ ಅವರು ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದಂತಿದೆ.
ಮುಖ್ಯವಾಗಿ, 2030ರ ವೇಳೆಗೆ ತಮಿಳುನಾಡು ಆರ್ಥಿಕತೆಯನ್ನು ಒಂದು ಟ್ರಿಲಿಯನ್‌ಗೆ ತಲುಪಿಸುವ ಗುರಿ ಮುಟ್ಟುವ ಹಿನ್ನೆಲೆಯಲ್ಲಿ ಸ್ಟಾಲಿನ್ ಹೊಸೂರು ಏರ್‌ಪೋರ್ಟ್ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಹೊಸೂರಿನಿಂದ 10 ಕಿ.ಮೀ. ದೂರದಲ್ಲಿರುವ ಬೆಳಗೊಂಡನಹಳ್ಳಿಯಲ್ಲಿ ಸಣ್ಣ ವಿಮಾನ ನಿಲ್ದಾಣ ಕಾರ್ಯಾಚರಿಸುತ್ತಿದೆ. 1994ರಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ತನೇಜ ಏರೋಸ್ಪೇಸ್ ಆ್ಯಂಡ್ ಏವಿಯೇಷನ್ ಕಂಪನಿ ಹೊಸೂರು ಏರೋಡ್ರೋಮ್‌ಅನ್ನು ಮುನ್ನಡೆಸುತ್ತಿದೆ. ಈ ಸ್ಥಳವನ್ನು ಒಳಗೊಂಡಂತೆ ಅಥವಾ ಇದರ ಸನಿಹದಲ್ಲೇ 2,000 ಎಕರೆ ವಿಸ್ತೀರ್ಣದಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸುವ ಆಶಯ ಹೊಂದಲಾಗಿದೆ. ಸದ್ಯ ತಮಿಳುನಾಡಿನಲ್ಲಿ ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಮಧುರೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸೇಲಂ, ಟುಟ್ಟಿಕೋರನ್‌ನಲ್ಲಿ ದೇಶಿ ವಿಮಾನಯಾನ ಸೇವೆ ಲಭ್ಯವಿದೆ. ಈ ಪಟ್ಟಿಗೆ ಹೊಸೂರ ಏರ್‌ಪೋರ್ಟ್ ಸೇರುತ್ತದೆ ಅಷ್ಟೇ ಎಂಬ ಮಾತನ್ನು ಕೆಲವರು ಹೇಳಿದ್ದಾರೆ.
ಕೆಐಎಗೆ ಸರಿಸಾಟಿ ಇಲ್ಲ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ವರ್ಷ 37.5 ದಶಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಮುಂದಿನ ಒಂದೆರಡು ವರ್ಷದಲ್ಲಿ 40 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಸರಕು ಸಾಗಣೆಯಲ್ಲಿ ವಾರ್ಷಿಕ 4 ಲಕ್ಷ ಟನ್ ನಿರ್ವಹಿಸುತ್ತಿದ್ದು, ದುಪಟ್ಟುಗೊಳಿಸುವ ಪ್ರಯತ್ನ ಸಾಗಿದೆ. ಕೆಐಎನಲ್ಲಿ ಸಿಗುತ್ತಿರುವ ಸೌಲಭ್ಯ ಪ್ರಯಾಣಿಕ ಸ್ನೇಹಿಯಾಗಿದೆ. ಎರಡನೇ ಟರ್ಮಿನಲ್ ಆರಂಭವಾದ ಬಳಿಕ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿಶ್ವದ ಟಾಪ್ ಹತ್ತು ಏರ್‌ಪೋರ್ಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಹೊಸೂರಿನಲ್ಲಿ ಏರ್‌ಪೋರ್ಟ್ ಸ್ಥಾಪನೆಯಾಗಿ ಕಾರ್ಯಾಚರಿಸಲು ಒಂದು ದಶಕ ಹಿಡಿಯುವುದರಿಂದ ಕೆಐಎಗೆ ಯಾವ ಸಮಸ್ಯೆಯೂ ಉಂಟಾಗದು ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ನಗರಕ್ಕೆ 2ನೇ ಏರ್‌ಪೋರ್ಟ್ ಅಗತ್ಯವಿದೆಯೇ?:
ಇಡೀ ವಿಶ್ವದಲ್ಲೇ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ಬೆಂಗಳೂರು ಜಾಗತಿಕವಾಗಿ ಸದ್ದು ಮಾಡಿದೆ. ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ವೈಮಾನಿಕ ಕ್ಷೇತ್ರಗಳಲ್ಲಿನ ಆವಿಷ್ಕಾರದ ತಾಣವಾಗಿ ಗಮನ ಸೆಳೆದಿದೆ. ನುರಿತ ಮಾನವ ಸಂಪನ್ಮೂಲದಿಂದಾಗಿ ಸ್ಟಾರ್ಟಪ್ ಹಾಗೂ ಯೂನಿಕಾರ್ನ್‌ಗಳ ಹೇರಳ ಲಭ್ಯತೆಯಿಂದ ಬೆಂಗಳೂರು ಭವಿಷ್ಯದ ತಂತ್ರಜ್ಞಾನದ ಹಬ್ ಆಗಿ ಗುರುತಿಸಲ್ಪಟ್ಟಿದೆ. ಈ ಬೆಳವಣಿಗೆ ಉದ್ಯಾನ ನಗದ ಅಭಿವೃದ್ಧಿಯ ದಿಕ್ಕನ್ನು ಬದಲಿಸುವ ಛಾಪು ಮೂಡಿಸಿದೆ. ಇದಕ್ಕೆ ತಕ್ಕಂತೆ ಜಾಗತಿಕ ಮಟ್ಟದ ಮೂಲಸೌಕರ್ಯ ಕಲ್ಪಿಸುವ ಸರ್ಕಾರದ ಆಶಯ ಕಾರ್ಯರೂಪಕ್ಕೆ ಬರಬೇಕಿದೆ. 2030ರ ವೇಳೆಗೆ ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲು ಬೆಂಗಳೂರು ಒಂದರಿಂದಲೇ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಹೊಂದಲಾಗಿದೆ. ಜತೆಗೆ 2047ಕ್ಕೆ ಸ್ವಾತಂತ್ರ್ಯ ಸಂಭ್ರಮದ 100ನೇ ವರ್ಷಾಚರಣೆ ವೇಳೆಗೆ ದೇಶವು ಎಲ್ಲ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ಪೂರಕ ವಾತಾವರಣ ಮೂಡಿಸಲು ಬೆಂಗಳೂರು ಬೆಳವಣಿಗೆ ಗಮನಿಸಿ ಎರಡನೇ ಏರ್‌ಪೋರ್ಟ್ ಅಗತ್ಯತೆ ಹೆಚ್ಚಿಸಲಿದೆ ಎಂದು ಪ್ರತಿಪಾದಿಸಲಾಗಿದೆ.
ಹೊಸೂರಿನಲ್ಲಿ ಏರ್‌ಪೋರ್ಟ್ ಬಂದಲ್ಲಿ ಬೆಂಗಳೂರು ದಕ್ಷಿಣ ಸಹಿತ ಎಲೆಕ್ಟ್ರಾನಿಕ್ ಸಿಟಿ ಭಾಗದ ಜನರಿಗೆ ವಿಮಾನಯಾನ ಸೌಲಭ್ಯ ಸುಲಭವಾಗಿ ಸಿಗಲಿದೆ. ದೂರದ ಕೆಐಎಗೆ ಟ್ರಾಫಿಕ್‌ನಲ್ಲಿ ಪ್ರಯಾಣಿಸುವ ಸಮಸ್ಯೆ ನಿವಾರಣೆಯಾಗುತ್ತಿದೆ. ಜನರಿಗೆ ಮೊಬಿಲಿಟಿ ಕೈಗೆಟಕುವ ದೃಷ್ಟಿಯಿಂದ ವಿಶಾಲ ಮನೋಭಾವದಿಂದ ಯೋಚಿಸಿದ್ದಲ್ಲಿ ಏರ್‌ಪೋರ್ಟ್ ಎಲ್ಲಿ ಬಂದರೂ ಸ್ವಾಗತಾರ್ಹ.
- ರಮೇಶ್‌ಚಂದ್ರ ಲಹೋಟಿ, ಎಫ್ಕೆಸಿಸಿಐ ಅಧ್ಯಕ್ಷ
ಕರ್ನಾಟಕದಲ್ಲಿರುವ ಉದ್ದಿಮೆಗಳನ್ನು ಆಕರ್ಷಿಸಲು ತಮಿಳುನಾಡು ಸಿಎಂ ಸ್ಟಾಲಿನ್ ಹೊಸೂರಿನಲ್ಲಿ ನೂತನ ಏರ್‌ಪೋರ್ಟ್ ನಿರ್ಮಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನಿಂದ ತಮಿಳುನಾಡು 40 ಕಿ.ಮೀ. ಅಂತರದಲ್ಲಿರುವ ಕಾರಣ ಈ ಹಿಂದೆಯೇ ಹೊಂದಿಷ್ಟು ಉದ್ದಿಮೆಗಳು ಅಲ್ಲಿಗೆ ಹೋಗಿವೆ. ಈಗ ಇನ್ನೊಂದು ಪ್ರಯತ್ನ ನಡೆದಿದೆ ಅಷ್ಟೇ. ನಮ್ಮ ಸರ್ಕಾರ ಮೂಲಸೌಕರ್ಯಕ್ಕೆ ಒತ್ತು ನೀಡಿದರೆ ಉದ್ದಿಮೆಗಳು ಸ್ಥಳಾಂತರ ಸಾಧ್ಯತೆ ಕಡಿಮೆಯಾಗಬಹುದು.
- ಟಿ.ವಿ.ಮೋಹನ್ ದಾಸ್ ಪೈ, ಇನ್ಫೋಸಿಸ್ ಮಾಜಿ ಸಿಎಎಫ್ಒ (‘ಎಕ್ಸ್’ನಲ್ಲಿ)
ಹೊಸೂರಿನಲ್ಲಿ ಹಾಲಿ ಕಾರ್ಯಾಚರಿಸುತ್ತಿರುವ ಕಿರು ವಿಮಾನ ನಿಲ್ದಾಣವನ್ನು (ಟಿಎಎಎಲ್) ಮೇಲ್ದರ್ಜೆಗೇರಿಸುವ ಅವಕಾಶ ಇದೆ. ಆದರೆ, ಸಿಎಂ ಸ್ಟಾಲಿನ್ ಹೊಸ ಸ್ಥಳದಲ್ಲಿ ಜಾಗತಿಕ ಮಟ್ಟದ ಏರ್‌ಪೋಟ್ ನಿರ್ಮಿಸುವ ಹೇಳಿಕೆ ಪ್ರಚಾರಕ್ಕೆ ನೀಡಿದಂತಿದೆ.
- ಕೆ.ಅಣ್ಣಾಮಲೈ, ತರ್ವಿುಳುನಾಡು ಬಿಜೆಪಿ ಅಧ್ಯಕ್ಷ (‘ಎಕ್ಸ್’ನಲ್ಲಿ)