ಎನ್.ಆರ್.ಪುರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷರ ಜಂಟಿ ಸುದ್ದಿಗೋಷ್ಠಿಯಲ್ಲಿ ಅರುಣಕುಮಾರ್, ಚಂದ್ರಶೇಖರ್,ಸೈಯದ್‌ರ್ವೀಜ್,ಕೆಸವಿಮಂಜುನಾಥ್,ಕೆ.ಎನ್.ಶಿವದಾಸ್,ಎನ್.ಎಂ.ಕಾಂತರಾಜ್ ಇದ್ದರು. 
ಜಿಲ್ಲೆ

ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಗೊಂದಲವಿಲ್ಲ

ಎನ್.ಆರ್.ಪುರ: ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ತಾಲೂಕಿನಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಲಾಗುವುದು ಎಂದು ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ಅರುಣಕುಮಾರ್ ತಿಳಿಸಿದರು.
ಶುಕ್ರವಾರ ಪತ್ರಿಕಾ ಭವನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸಮನ್ವಯ ಸಮಿತಿ ರಚನೆಯಾಗಿದೆ. ಎನ್‌ಡಿಎ ಒಕ್ಕೂಟದಲ್ಲಿ ಎರಡು ಪಕ್ಷಗಳು ಮಿತ್ರರಾಗಿದ್ದು ಮುಂದೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಉಡುಪಿ,ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಎರಡೂ ಪಕ್ಷಗಳು ಸೇರಿ ಅತ್ಯಧಿಕ ಬಹುಮತದಿಂದ ಗೆಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ತಾಲೂಕಿನಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಭೆ ನಡೆಸಲಾಗಿದೆ. ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಗಿಸಲಾಗುವುದು. ಇದೇ ರೀತಿ ಮುಂದೆ ಗ್ರಾಪಂ ಹಾಗೂ ಬೂತ್ ಮಟ್ಟದಲ್ಲೂ ಸಭೆ ಕರೆದು ಒಟ್ಟಾಗಿ ಮತಕೇಳಲು ಸೂಚಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಜೆಡಿಎಸ್‌ಮುಖಂಡ ಚಂದ್ರಶೇಖರ್ ಮಾತನಾಡಿ, ನಮ್ಮ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್ ಮುಖಂಡರ ನಿರ್ದೇಶನದಂತೆ ಕಾರ್ಯನಿರ್ವಹಿಸಲಾಗುವುದು. ಉಡುಪಿ, ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಅವರು ತಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಈಗ ಉನ್ನತ ಸ್ಥಾನಕ್ಕೆ ತಲುಪಿದ್ದಾರೆ ಎಂದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್, ಬಿಜೆಪಿ ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೈಯ್ಯದ್‌ಪರ್ವೀಜ್, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಶಿವದಾಸ್, ಉಪಾಧ್ಯಕ್ಷ ಉಪೇಂದ್ರ, ನಗರ ಘಟಕದ ಉಸ್ತುವಾರಿ ಕೆ.ಟಿ.ಚಂದ್ರಶೇಖರ್ ಇದ್ದರು.