ಶ್ರೀಶೈಲದ ಜಗದ್ಗುರು ಸೂರ್ಯ ಸಿಂಹಾಸನ ಮಹಾಪೀಠದಲ್ಲಿ ಸಾಮೂಹಿಕ ಅಯ್ಯಚಾರ ಕಾರ್ಯಕ್ರಮದಲ್ಲಿ ಭಾಗಿಯಾದ ವಟುಗಳು. ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ರೇಣುಕ ಶಿವಾಚಾರ್ಯರು ಇತರರಿದ್ದರು. 
ಜಿಲ್ಲೆ

ಲಿಂಗದೀಕ್ಷೆಯಲ್ಲಿ ಜಾತಿ ಭೇದವಿಲ್ಲ

ಶ್ರೀಶೈಲಂ (ಆಂಧ್ರಪ್ರದೇಶ): ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು ಶಿಷ್ಯನಿಗೆ ದಯಪಾಲಿಸುವ ಇಷ್ಟಲಿಂಗ ದೀಕ್ಷೆ ಪವಿತ್ರ ಸಂಸ್ಕಾರದಲ್ಲಿ ಜಾತಿ ಭೇದವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಶ್ರೀಶೈಲದ ಜಗದ್ಗುರು ಸೂರ್ಯ ಸಿಂಹಾಸನ ಮಹಾಪೀಠದಲ್ಲಿ ಗುರುವಾರ ನಡೆದ ಸಾಮೂಹಿಕ ಅಯ್ಯಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನಿಗೆ ಅನಾದಿ ಕಾಲದಿಂದ ಆಣವ, ಮಾಯಿಯ ಮತ್ತು ಕಾರ್ಮಿಕ ಎಂಬ ಮೂರು ಪ್ರಕಾರದ ಮಲಗಳು ಆವರಿಸಿರುತ್ತವೆ. ಈ ಮಲಗಳೇ ಮನುಷ್ಯನ ಸಂಸಾರಿಕ ದುಃಖಗಳು ಹಾಗೂ ಭವಬಂಧನಕ್ಕೆ ಕಾರಣವಾಗಿರುತ್ತವೆ. ಗುರು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಚಾರಗಳನ್ನು ನೀಡುವಾಗ ವೇದಾ ದೀಕ್ಷೆ, ಮಂತ್ರ ದೀಕ್ಷೆ ಮತ್ತು ಕ್ರಿಯಾ ದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ತಿರೋಹಿತಗೊಳಿಸುತ್ತಾನೆ.

ಕ್ಷೆಯಲ್ಲಿ ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ಅದನ್ನು ತಪ್ಪದೆ ಪೂಜಿಸಬೇಕು. ಈ ಲಿಂಗವನ್ನು ಜಾತಿ, ವರ್ಣ, ವರ್ಗ ಮೊದಲಾದ ಯಾವುದೇ ಭೇದವಿಲ್ಲದೆ ಕೇವಲ ಶಕ್ತಿಪಾತ ಮತ್ತು ಸದ್ಗುಣ ಸದಾಚಾರಗಳ ಆಧಾರದ ಮೇಲೆ ಸರ್ವರಿಗೂ ನೀಡಲಾಗುತ್ತದೆ. ಇದನ್ನು ಪಡೆದ ಬಳಿಕ ಸದಾಚಾರ, ಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದ ಲಿಂಗಪೂಜೆ ಮಹಾವ್ರತವನ್ನು ಪರಿಪಾಲಿಸುವ ವ್ಯಕ್ತಿ ಸುಲಭವಾಗಿ ಮೋಕ್ಷ ಪಡೆಯುತ್ತಾನೆ ಎಂದರು.

ಜೈನಾಪುರದ ರೇಣುಕ ಶಿವಾಚಾರ್ಯರು ಲಿಂಗದೀಕ್ಷೆ ಮತ್ತು ಅಯ್ಯಚಾರ ಕಾರ್ಯ ನೆರವೇರಿಸಿದರು. 250ಕ್ಕೂ ಅಧಿಕ ಜಂಗಮ ವಟುಗಳು ಅಯ್ಯಚಾರವನ್ನು ಹಾಗೂ ಅನೇಕ ಭಕ್ತರು ಲಿಂಗದೀಕ್ಷೆ ಪಡೆದುಕೊಂಡರು. ನಿವೃತ್ತ ಪ್ರಧಾನ ಅರ್ಚಕರಾದ ಶ್ರೀ ಪೀಠದ ಮಲ್ಲಯ್ಯ ಸ್ವಾಮಿಗಳು ಮತ್ತು ಶಿವಶಂಕರ ಶಾಸ್ತ್ರಿಗಳು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಪೀಠದ ಮುಖ್ಯ ಮ್ಯಾನೇಜರ್ ಎಂ.ಬಿ.ಮಂಜುನಾಥ ಸ್ವಾಗತಿಸಿದರು. ಶ್ರೀಶೈಲಂ ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವಾರು ಭಕ್ತರು ಪಾಲ್ಗೊಂಡಿದ್ದರು.