ಜಿಲ್ಲೆ

ಗ್ರಾಮೀಣ ಭಾಗದಲ್ಲಿಲ್ಲ ಬಸ್ ತಂಗುದಾಣ

ಪ್ರಸಿನ್ ಕೆ.ಆರ್

ಡಿ.ಪಿ.ಮಹೇಶ್ ಯಳಂದೂರು

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬಸ್ ತಂಗುದಾಣಗಳು ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವೆಡೆ ತಂಗುದಾಣಗಳು ಶಿಥಿಲಗೊಂಡಿವೆ. ಈ ಬಗ್ಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ತಾಲೂಕು 33 ಗ್ರಾಮಗಳನ್ನು ಒಳಗೊಂಡಿದ್ದು, ಉಪ್ಪಿನಮೋಳೆ, ಕೃಷ್ಣಪುರ, ಯರಿಯೂರು, ಅಂಬಳೆಪಾಲ, ಹೊನ್ನೂರು, ಕೆಸ್ತೂರು, ಕೆ.ಹೊಸೂರು, ಬಸವಾಪುರ, ಮಾಂಬಳ್ಳಿ, ಗಣಿಗನೂರು, ಬನ್ನಿಸಾರಿಗೆ, ಅಲ್ಕೆರೆ ಅಗ್ರಹಾರ, ವಡಗೆರೆ, ಬಿಳಿಗಿರಿರಂಗನಬೆಟ್ಟ, ದಾಸನಹುಂಡಿ, ಕೆ.ದೇವರಹಳ್ಳಿ ಗ್ರಾಮಗಳು ಸೇರಿ 17 ಗ್ರಾಮಗಳಲ್ಲಿ ಬಸ್ ತಂಗುದಾಣಗಳ ಸಮಸ್ಯೆ ಇದೆ.

ಅಗರ, ಮದ್ದೂರು, ಮೆಲ್ಲಹಳ್ಳಿ ಗೇಟ್, ವೈ.ಕೆ. ಮೋಳೆ, ಮೆಲ್ಲಹಳ್ಳಿ, ಯರಗಂಬಳ್ಳಿ, ದೇವರಹಳ್ಳಿ, ಶಿವಕಹಳ್ಳಿ ಸೇರಿದಂತೆ 8ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಶಕಗಳ ಹಿಂದೆ ನಿರ್ಮಾಣ ಮಾಡಲಾದ ಬಸ್ ತಂಗುದಾಣಗಳು ಶಿಥಿಲಗೊಂಡಿವೆ.

ಸ್ಥಳೀಯ ಆಡಳಿತದ ಹಾಗೂ ಸಂಬಂಧಪಟ್ಟ ಇಲಾಖೆ ತಂಗುದಾಣವನ್ನು ನಿರ್ವಹಣೆ ಮಾಡದೆ ನಿರ್ಲಕ್ಷೃ ಮಾಡಿರುವ ಹಿನ್ನೆಲೆ, ಜನರು ನಿಲ್ದಾಣದಲ್ಲಿ ಆಶ್ರಯ ಪಡೆಯುವುದು ಕಷ್ಟಸಾಧ್ಯವಾಗಿದೆ. ಇವುಗಳು ನಾಯಿಗಳ ಆವಾಸಸ್ಥಾನವಾಗಿ ಪರಿವರ್ತನೆಯಾಗಿವೆ.

ನೆಲದಲ್ಲಿ ಕೂರುವ ಸ್ಥಿತಿ: ಕೆಲವು ಬಸ್ ತಂಗುದಾಣಗಳಲ್ಲಿ ಆಸನದ ವ್ಯವಸ್ಥೆ ಇಲ್ಲದೆ ನೆಲದಲ್ಲೇ ಕುಳಿತುಕೊಳ್ಳುವ ಸ್ಥಿತಿ ಇದೆ. ಕೆಲವು ನಿಲ್ದಾಣಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ತಂಗುದಾಣದಲ್ಲಿ ಕಸದ ರಾಶಿ ಕಾಣಬಹುದಾಗಿದೆ. ಮದ್ಯದ ಬಾಟಲಿ, ತಿಂಡಿ-ತಿನಿಸುಗಳ ಪ್ಯಾಕೆಟ್ ಮತ್ತಿತರ ವಸ್ತುಗಳು ಬಸ್ ತಂಗುದಾಣದಲ್ಲಿ ಅಲ್ಲಲ್ಲಿ ಬಿದ್ದಿದ್ದು, ಪ್ರಯಾಣಿಕರು ತಂಗುದಾಣದ ಒಳಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಆಡಳಿತ ಜನತೆಯಬೇಡಿಕೆಯಂತೆ ಅನುದಾನ ಹೊಂದಿಸಿ ಬಸ್ ತಂಗುದಾಣ ನಿರ್ಮಿಸಿದರೂ ಅದರ ನಿರ್ವಹಣೆ ಮಾತ್ರ ಸವಾಲಿನ ಕೆಲಸವಾಗಿದೆ. ಹಲವು ಕಡೆಗಳಲ್ಲಿ ಬಸ್ ತಂಗುದಾಣ ಕುಡುಕರ ತಾಣಗಳಾಗಿ ಮಾರ್ಪಾಡಾಗುತ್ತಿವೆ. ಅಶುಚಿತ್ವ ತಾಂಡವಾಡುತ್ತಿದ್ದು, ಸಾರ್ವಜನಿಕರು ಒಳಗೆ ಪ್ರವೇಶಿಸದಂತಾಗಿದೆ.

ಕೆಲವು ನಿಲ್ದಾಣದ ಸುತ್ತಲು ಗಿಡಗಂಟಿ ಬೆಳೆದು ಜನರು ಒಳಗೆ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಬಿಸಿಲು, ಮಳೆಯಲ್ಲಿ ಜನರು ಹೊರಗೆ ನಿಂತು ಬಸ್‌ಗೆ ಕಾಯಬೇಕಾದ ಪರಿಸ್ಥಿತಿ ಇದೆ. ಜನರು ಆಡಳಿತ ವ್ಯವಸ್ಥೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.