ಮೈಸೂರು: ಗಾಂಧಿಯನ್ನು ಧ್ವೇಷ ಮಾಡಬೇಕು ಎಂಬ ಉದ್ದೇಶದಿಂದದ ಧ್ವೇಷ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಎಂದು ಸಂಸ್ಕೃತಿ ಚಿಂತಕ ನಟರಾಜ್ ಹುಳಿಯಾರ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಶುಕ್ರವಾರ ಗಾಂಧಿ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಅಹಿಂಸಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗಾಂಧಿಯನ್ನು ಧ್ವೇಷ ಮಾಡುವ ಬದಲು ಅವರ ಚಿಂತನೆಗಳೊಂದಿಗೆ ಸಂವಾದ, ವಾಗ್ವಾದ ನಡೆಸೋಣ. ಬೇಕಿದ್ದಲ್ಲಿ ಅವರ ಕೆಲವು ಚಿಂತನೆಗಳನ್ನು ಕೈ ಬಿಡೋಣ. ಆದರೆ, ಅವರನ್ನು ಧ್ವೇಷ ಮಾಡಿ ಏನೂ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿ ಅವರ ನಾಯಕತ್ವ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಗತ್ತಿಗೆ ಪ್ರೇರಣೆ ನೀಡುತ್ತಿರುವ ಅವರ ನಾಯಕತ್ವ ನಿರಂತರವಾಗಿ ಮುಂದುವರಿಯಲಿದೆ. ವಿದೇಶದಿಂದ ಭಾರತಕ್ಕೆ ಮರಳಿದ ಗಾಂಧೀಜಿ ದೇಶಾದ್ಯಂತ ಪರ್ಯಟನೆ ನಡೆಸಿ ಜನರ ವಿಶ್ವಾಸ ಗಳಿಸಿದರು. ಸತ್ಯದ ಶಕ್ತಿಯ ಮೂಲಕ ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದರು. ಗಾಂಧೀಜಿ ಎಂದಿಗೂ ಮುಗಿಯುವ ಅಧ್ಯಾಯವಲ್ಲ, ಅವರು ನಮ್ಮೊಳಗೆ ನಿರಂತರವಾಗಿ ಹುಟ್ಟುವ ಆಶಯ ಎಂದು ಬಣ್ಣಿಸಿದರು.
ಜಾತೀಯತೆ ಮನಸ್ಸಿನಿಂದ ದೂರವಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಚಿಂತಿಸುವುದನ್ನು ಗಾಂಧೀಜಿ ಕಲಿಸಿಕೊಟ್ಟರು. ದಕ್ಷಿಣ ಆಫ್ರಿಕಾದಲ್ಲಿ ಅವಮಾನ ಅನುಭವಿಸಿದ ಅವರು, ಭಾರತದಲ್ಲಿ ಅಸ್ಪೃಶ್ಯತೆಯಿಂದ ನಮ್ಮ ಸಹೋದರರು ಎದುರಿಸುತ್ತಿದ್ದ ಅವಮಾನದ ಬಗ್ಗೆಯೂ ಚಿಂತಿಸಿದರು. ಅವಮಾನಗಳನ್ನು ಸಹಿಸಿಕೊಂಡು ಬೆಳೆಯುವ ಮಾರ್ಗವನ್ನು ತೋರಿಸಿದರು ಎಂದರು.
ಒಳ್ಳೆಯವರ ಮೌನದಿಂದ ರಾಜಕಾರಣ ಹದಗೆಡುತ್ತಿದೆ. ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯ ಹಾದಿ ಕುಂಠಿತವಾಗಿರಬ ಹುದು. ಆದರೆ, ಅಧಿಕಾರದಲ್ಲಿರುವವರ ಆಕ್ರಮಣಕಾರಿ ನಡೆಗಳನ್ನು ನಿರ್ಭಯವಾಗಿ ವಿರೋಧಿಸುವಾಗ ಗಾಂಧೀಜಿಯವರ ತತ್ವಗಳು ನಮ್ಮ ನೆರವಿಗೆ ಬರುತ್ತವೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರೊ.ಎಂ.ಬಿ. ಸುರೇಶ್ ಇದ್ದರು.