ಹುಬ್ಬಳ್ಳಿ : ಪ್ರತಿ ವರ್ಷ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಪಡೆದು ವೃತ್ತಿ ಆರಂಭಿಸುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯ ಲಭಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ವೈದ್ಯಕೀಯ ವಿಜ್ಞಾನ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಧಾರವಾಡ ಎಸ್ಡಿಎಂ, ಕೆಎಲ್ಇ ಸಂಸ್ಥೆ, ಕರ್ನಾಟಕ ಫಿಜಿಯನ್ಸ್ ಅಸೋಸಿಯೇಷನ್ ಹು-ಧಾ ಶಾಖೆ ವತಿಯಿಂದ ಇಲ್ಲಿನ ಕೆಎಂಸಿಆರ್ಐ ಸಭಾಂಗಣದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ 42ನೇ ಕಾಪಿಕಾನ್ 2025 (ಕರ್ನಾಟಕ ಅಸೋಸಿಯೇಷನ್ ಆಫ್ ಫಿಜಿಸಿಯನ್ಸ್ ಆಫ್ ಇಂಡಿಯಾ ಕಾನ್ಪರೆನ್ಸ್) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯಲ್ಲಿರುವ 75 ಹಾಗೂ ದೇಶದಲ್ಲಿರುವ 700 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿಂದ ವೈದ್ಯಕೀಯ ಶಿಕ್ಷಣ ಪಡೆಯುವ ವೈದ್ಯರು, ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸಲು ಗಮನ ಹರಿಸಬೇಕು. ಮುಂಬರುವ ದಿನಗಳಲ್ಲಿ ವೈದ್ಯಕೀಯ ಸೇವೆ ಇನ್ನೂ ಸುಧಾರಿಸುವಂತಾಗಲಿ ಎಂದರು.
ಅತಿಥಿಯಾಗಿದ್ದ ಡಾ. ಜ್ಯೋತಿರ್ಮಯ ಪಾಲ್ ಮಾತನಾಡಿ, ರೋಗಿಗಳು ಹಾಗೂ ವೈದ್ಯರ ಮಧ್ಯೆ ಉತ್ತಮ ಬಾಂಧವ್ಯ ಇರಬೇಕು. ಕೆಲ ಬಾರಿ ಸಂಭವಿಸುವ ಸಮಸ್ಯೆಗಳಲ್ಲಿನ ತಪ್ಪುಗಳನ್ನು ಅರಿತು, ಅದನ್ನು ತಿದ್ದಿಕೊಂಡು ಮುನ್ನಡೆಯಬೇಕು. ರಕ್ಷಣೆ, ಬಾಹ್ಯಾಕಾಶ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ವೈದ್ಯಕೀಯ ಕ್ಷೇತ್ರವೂ ಮಹತ್ವದ್ದಾಗಿದ್ದು, ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.
ಕೆಎಂಸಿಆರ್ಐ ನಿರ್ದೇಶಕ ಡಾ. ಎಫ್.ಎಚ್. ಕಮ್ಮಾರ ಮಾತನಾಡಿ, ಕೆಎಂಸಿಆರ್ಐ ಆಸ್ಪತ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಸಂಜೀವಿನಿಯಂತಿದೆ. 2,404 ಹಾಸಿಗೆಗಳ ಸಾಮರ್ಥ್ಯ ಇರುವ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಲಭಿಸುತ್ತಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಡಾ. ಬಿ.ಎಸ್. ಪಾಟೀಲ ಹಾಗೂ ಮತ್ತಿತರ ಹಿರಿಯ ವೈದ್ಯರು ಮಾತನಾಡಿದರು.
ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಸಂಶೋಧಕರು, ಆರೋಗ್ಯ ಸೇವಾ ವೃತ್ತಿಪರರು ಹಾಗೂ ಇತರರು ಪಾಲ್ಗೊಂಡಿದ್ದರು.
ಕಾಪಿಕಾನ್ ಆಯೋಜನಾ ಸಮಿತಿ ಅಧ್ಯಕ್ಷ ಡಾ. ಈಶ್ವರ ಹಸಬಿ, ಎಪಿಐ ಕರ್ನಾಟಕ ಘಟಕದ ಕಾರ್ಯದರ್ಶಿ ಡಾ. ವಿಶ್ವನಾಥ, ಡಾ. ರಾಘವೇಂದ್ರ ಬೆಳಗಾಂವ್ಕರ, ಡಾ. ನರಸಿಂಹಲು, ಡಾ. ಜಿ.ಬಿ. ಸತ್ತೂರ, ಡಾ. ಮುರಳಿ ಮೋಹನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.