ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ದಾಟಿರುವ ಕಾರಣ ಬಿಬಿಎಂಪಿಯನ್ನು ವಿಭಜಿಸಿ ಆಡಳಿತವನ್ನು ಇನ್ನಷ್ಟು ಉತ್ತಮಗೊಳಿಸುವ ಸರ್ಕಾರದ ಚಿಂತನೆಗೆ ಸಾರ್ವಜನಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.
ಪ್ರಸ್ತುತ ಬಿಬಿಎಂಪಿ ಆಡಳಿತ ಜಿಡ್ಡುಗಟ್ಟಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ನಾಗರಿಕರ ಕುಂದು-ಕೊರತೆ ಆಲಿಸುವ ವ್ಯವಸ್ಥೆಯೇ ನಿಂತುಹೋಗಿದೆ. ವಾರ್ಡ್‌ಗಳಲ್ಲಿ ಸಣ್ಣ ಕೆಲಸ ಮಾಡಿಸಲೂ ಮಾಜಿ ಕಾರ್ಪೊರೇಟರ್‌ಗಳಿಗೆ ಸಾಧ್ಯವಾಗಿಲ್ಲ. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಿದ್ದು, ಕಾಲಮಿತಿಯೊಳಗೆ ಚುನಾವಣೆ ನಡೆಯಬೇಕು. ಒಂದೇ ಪಾಲಿಕೆಯಡಿ ಸಕಲ ಮೂಲಸೌಕರ್ಯ ಕಲ್ಪಸುವ ಸುಧಾರಣಾ ವ್ಯವಸ್ಥೆಯನ್ನು ತರಬೇಕು ಎಂಬ ಸಲಹೆ ವ್ಯಕ್ತವಾಗಿದೆ.
ಬಿಬಿಎಂಪಿಯನ್ನು ವಿಭಜಿಸಿ 5 ಪಾಲಿಕೆಯನ್ನಾಗಿ ಮಾಡುವತ್ತ ಕಾಂಗ್ರೆಸ್ ಸರ್ಕಾರ ದೃಷ್ಟಿಹರಿಸಿದೆ. ಹಾಲಿ ವ್ಯವಸ್ಥೆಯಲ್ಲಿ ಸಮಸ್ಯೆಗಳೇ ಹೆಚ್ಚಾಗಿದ್ದು, ಪಾಲಿಕೆ ಆಡಳಿತವನ್ನು ಒಬ್ಬರೇ ಮುಖ್ಯ ಆಯುಕ್ತರು ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ವಲಯಗಳಲ್ಲಿನ ಸಮಸ್ಯೆಗಳು ಕೇಂದ್ರ ಕಚೇರಿಗೆ ತಲುಪುತ್ತಿರುವ ಕಾರಣ ಕನಿಷ್ಠ ಸಣ್ಣ ಪಾಲಿಕೆಗಳನ್ನಾಗಿ ವಿಭಜಿಸಿ ಆಡಳಿತ ಸುಧಾರಣೆ ಮಾಡುವುದು ಒಳಿತು ಎಂಬ ವಾದವನ್ನು ಕಾಂಗ್ರೆಸ್ ಮುಂದಿಟ್ಟಿದೆ.
ರಾಜಧಾನಿ ಮೇಲೆ ಹಿಡಿತ ಸಾಧಿಸುವ ತಂತ್ರ?:
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದೊಂದು ದಶಕದಿಂದ ಬಿಜೆಪಿ ಹೆಚ್ಚಿನ ಹಿಡಿತ ಸಾಧಿಸಿದೆ. ವಿಧಾನಸಭೆ, ಲೋಕಸಭೆ ಹಾಗೂ ಬಿಬಿಎಂಪಿ ಆಡಳಿತವನ್ನು ಕಮಲ ಪಾಳಯ ಅಧಿಕಾರವನ್ನು ಮುನ್ನಡೆಸಿದೆ. ಇದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದ್ದು, ರಾಜಧಾನಿಯಲ್ಲಿ ಪಕ್ಷಕ್ಕೆ ಅಧಿಕಾರ ಸಿಗದಿರುವುದು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಬಿಬಿಎಂಪಿಯನ್ನು 5 ಪಾಲಿಕೆಯಾಗಿ ವಿಭಜಿಸಿದರೆ ಒಂದೆರಡು ಪಾಲಿಕೆಯಲ್ಲಿ ಅಧಿಕಾರ ದೊರೆತು ತನ್ನ ನೆಲೆ ವಿಸ್ತರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದೆ. ಇದಕ್ಕೆ ಹೆಚ್ಚಿನ ಮುಖಂಡರು ಹಾಗೂ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಕಾಂಗ್ರೆಸ್‌ನ ಈ ನಡೆ ಪಕ್ಷಕ್ಕೆ ನೆಲೆ ತಂದುಕೊಡಲಿದೆ ಎಂಬ ವಿಶ್ವಾಸ ಆ ಪಕ್ಷದ ಚಿಂತಕರ ಚಾವಡಿಯಲ್ಲೂ ಚರ್ಚೆ ನಡೆದಿದೆ. ಆದರೆ, ಈ ಪ್ರಸ್ತಾಪಕ್ಕೆ ಸಾರ್ವಜನಿಕರ ವಲಯದಿಂದ ಬೆಂಬಲ ಪಡೆಯಲು ಕಾಂಗ್ರೆಸ್ ಸಾಧ್ಯವಾಗುತ್ತಿಲ್ಲ. ನಗರವನ್ನು ಸಮಾನ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಒಂದೇ ಪಾಲಿಕೆ ಇದ್ದರೆ ಒಳಿತು. ತಪ್ಪುಗಳು ನುಸುಳದಂತೆ ಅಧಿಕಾರ ವಿಕೇಂದ್ರೀಕರಣ ಮಾಡಿ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಬೇಕು ಎಂಬ ಸಲಹೆಯನ್ನು ಮಾಜಿ ಕಾರ್ಪೊರೇಟರ್‌ಗಳು ನೀಡಿದ್ದಾರೆ.
ಆರ್ಥಿಕ ಅಸಮತೋಲನ ಹೆಚ್ಚಳಕ್ಕೆ ದಾರಿ:
ಬಿಬಿಎಂಪಿಯನ್ನು ವಿಭಜಿಸುವ ಪ್ರಸ್ತಾಪ ಸರಿಯಾದ ನಿಲುವಾಗದು. ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಕಷ್ಟವಾಗುತ್ತಿದೆ ಎಂಬ ಮಾತು ಒಪ್ಪಲಾಗದು. ಪ್ರಮುಖವಾಗಿ ಹೊಸ ಪಾಲಿಕೆ ರಚಿಸಿದರೆ ಅವುಗಳ ಆದಾಯ-ವೆಚ್ಚ ಬಾಬ್ತು ಸಮಸ್ಯೆಯ ಗೂಡಾಗಲಿದೆ. ಇದರಿಂದ ಆರ್ಥಿಕ ಅಸಮತೋಲನಕ್ಕೆ ಆಸ್ಪದ ನೀಡಿದಂತಾಗುತ್ತದೆ. ಒಂದು ಪಾಲಿಕೆ ಹೆಚ್ಚು ಆದಾಯ ಹೊಂದಿ ಅಭಿವೃದ್ಧಿ ಕೈಗೊಳ್ಳುತ್ತಿದ್ದರೆ, ಇನ್ನೊಂದು ಪಾಲಿಕೆ ಹಣವಿಲ್ಲದೆ ಸರ್ಕಾರದ ನೆರವಿಗಾಗಿ ಕಾದುಕುಳಿತರೆ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಯಾರು ಎಂದು ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಪ್ರಶ್ನಿಸಿದ್ದಾರೆ.
ಈಗಾಗಲೇ ದೆಹಲಿ ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕವಾಗಿ 3 ಭಾಗಗಳಾಗಿ ವಿಭಜಿಸಲಾಗಿತ್ತು. ಕೆಲ ವರ್ಷಗಳ ಬಳಿಕ ಸಮಸ್ಯೆ ಎದುರಾಗಿ ಅಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರಿದ ಕಾರಣ ಮತ್ತೆ ಮೂರೂ ಪಾಲಿಕೆಗಳನ್ನು ಒಟ್ಟುಗೂಡಿಸಲಾಗಿದೆ. ಇಂತಹ ಸ್ಥಿತಿ ಬೆಂಗಳೂರಿಗೆ ಬಾರದೇ ಇರದು. ಮುಖ್ಯವಾಗಿ ಕನ್ನಡಿಗರು ಬೆಂಗಳೂರು ನಗರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು, ಇದಕ್ಕೆ ಧಕ್ಕೆ ಉಂಟು ಮಾಡುವ ಯತ್ನವನ್ನು ಕಾಂಗ್ರೆಸ್ ಸರ್ಕಾರ ಕೈಗೊಳ್ಳಬಾರದು. ಯಾವುದೇ ಸುಧಾರಣೆ ಮಾಡುವುದಿದ್ದರೂ, ಅದನ್ನು ಹಾಲಿ ಬಿಬಿಎಂಪಿಯೊಂದಿಗೆ ನಡೆಸಬೇಕು. ಸರ್ಕಾರ ಕಾಯ್ದೆ, ನಿಯಮದಡಿ ಹೆಚ್ಚಿನ ಅಧಿಕಾರ ನೀಡಿದರೆ ಹೊಸ ಪಾಲಿಕೆಗಳ ಅಗತ್ಯ ಇರದು ಎಂದು ಎನ್.ಆರ್.ರಮೇಶ್ ಅವರು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ವಿಭಜನೆ ಅಲ್ಲ, ಆಡಳಿತ ವಿಕೇಂದ್ರೀಕರಣ ಅಷ್ಟೇ:
ಸರ್ಕಾರ ಬಿಬಿಎಂಪಿಯನ್ನು ವಿಭಜನೆ ಮಾಡಲು ಹೊರಟಿಲ್ಲ. ಬದಲಾಗಿ ಆಡಳಿತ ವಿಕೇಂದ್ರೀಕರಣವನ್ನಷ್ಟೇ ಮಾಡುವ ಪ್ರಯತ್ನ ಸಾಗಿದೆ. ಇಡೀ ನಗರವನ್ನು ಪ್ರತಿನಿಧಿಸುವ ಗ್ರೇಟರ್ ಬೆಂಗಳೂರು ಅಡಿಯಲ್ಲಿ 5 ವಿಭಾಗಗಳಲ್ಲಿ ಹೊಸ ಪಾಲಿಕೆಗಳನ್ನು ರಚಿಸುವ ಉದ್ದೇಶ ಇದೆ. ಇದರಿಂದ ಮೇಯರ್, ಕಮಿಷನರ್ ಮೇಲಿರುವ ಒತ್ತಡ ತಗ್ಗಿ ಆಯಾ ಪಾಲಿಕೆಗಳ ಮಟ್ಟದಲ್ಲೇ ನಾಗರಿಕ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯಿಂದ ಬೆಂಗಳೂರು ನಿಮಾತೃ ಕೆಂಪೇಗೌಡರ ಆಶಯಕ್ಕೆ ಧಕ್ಕೆ ಆಗದು. ಪ್ರತಿಪಕ್ಷಗಳು ಕೇವಲ ಸರ್ಕಾರದ ನಿಲುವು ವಿರೋಧಿಸಲು ಕೆಂಪೇಗೌಡರ ಬೆಂಗಳೂರನ್ನು ವಿಭಜಿಸಲಾಗುತ್ತಿದೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಇದು ವಿಭಜನೆ ಅಲ್ಲ, ಆಡಳಿತ ವಿಕೇಂದ್ರೀಕರಣಕ್ಕಾಗಿ ಕೈಗೊಳ್ಳಲಾಗುವ ನಿರ್ಧಾರ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು.
ಒಂದು ವೇಳೆ ವಿಭಜನೆ ಎಂದು ತಿಳಿದರೆ ಬೆಂಗಳೂರಿನಲ್ಲಿ ಮೂವರು ಸಂಸದರು, 28 ಶಾಸಕರಿದ್ದು, ಅವರಿಂದ ನಗರವನ್ನು ಒಡೆದಂತೆ ಆಗುವುದಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಭವಿಷ್ಯದ ಆಗುಹೋಗುಗಳನ್ನು ಗಮನಿಸಿ ಬಿಬಿಎಂಪಿಗೆ ಹೊಸ ರೂಪ ನೀಡಲಾಗುತ್ತಿದೆ. ನೂತನ ವ್ಯವಸ್ಥೆಯಿಂದ ಜನರಿಗೆ ಒಳಿತಾಗಬೇಕು, ನಗರ ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ನಗರ ಆಡಳಿತ ಸುಗಮವಾಗಿ ಸಾಗಬೇಕು ಎಂಬ ಉದ್ದೇಶ ಮಾತ್ರ ಸರ್ಕಾರಕ್ಕಿದೆ. ಈ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಶಾಸಕರು ಜನಪರ ಚಿಂತನೆಯ ತಳಹದಿಯ ಮೇಲೆ ವಿಮರ್ಶಿಸಬೇಕಾದ ಅಗತ್ಯ ಇದೆ ಎಂದು ಬಿಡಿಎ ಅಧ್ಯಕ್ಷ, ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್ ಪ್ರತಿಕ್ರಿಯಿಸಿದ್ದಾರೆ.
ಕೆಂಪೇಗೌಡರ ಆಶಯಕ್ಕೆ ವಿರುದ್ಧದ ನಡೆ:
ಬೆಂಗಳೂರು ನಗರಕ್ಕೆ ತನ್ನದೇ ಆದ ಇತಿಹಾಸ ಇದೆ. 500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಈ ನಗರವನ್ನು ವಾಣಿಜ್ಯ ದೃಷ್ಟಿಯಿಂದಲೂ ಗಮನಿಸಿ ಆಗಲೇ ಅಭಿವೃದ್ಧಿಗೆ ಅಸ್ತಿಭಾರ ಹಾಕಿದ್ದರು. ಅದರಂತೆ ಆಡಳಿತಕ್ಕೂ ಸೂಕ್ತವಾಗುವ ನಗರವನ್ನಾಗಿ ಮಾರ್ಪಡಿಸಿದ್ದರು. ಇಂತಹ ವ್ಯವಸ್ಥೆಯನ್ನು ಉಳಿಸಿಕೊಂಡು ಈಗಿನ ಕಾಲಕ್ಕೆ ಬೇಕಾಗುವ ರೀತಿ ಮಾರ್ಪಡಿಸಿ ಆಡಳಿತ ನಡೆಸಬೇಕೆ ಹೊರತು ವಿಭಜನೆ ಮಾಡುವುದು ಮೂರ್ಖತನದ ಪರಮಾವಧಿ.
- ಅಶ್ವತ್ಥನಾರಾಯಣಗೌಡ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ