ಮೈಸೂರು: ಪ್ರತಿಯೊಂದು ಮಗುವಿನಲ್ಲಿ ಅಗಾಧವಾದ ಶಕ್ತಿ ಅಡಗಿರುತ್ತದೆ. ಅದಕ್ಕೆ ಉತ್ತಮವಾದ ಮಾರ್ಗದರ್ಶನ ಮತ್ತು ಪೂರಕ ವಾತಾವರಣ ನಿರ್ಮಾಣ ಮಾಡಿದ್ದೇ ಆದರೆ ಮಕ್ಕಳ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳುತ್ತದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ವಿದ್ಯಾರಣ್ಯಪುರಂನ ನಳಂದ ಎಜುಕೇಷನ್ ಸೊಸೈಟಿ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ನಳಂದ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಶಿಕ್ಷಣ ಪಡೆದಂತಹ ಅದೆಷ್ಟೋ ಪ್ರತಿಭಾನ್ವಿತರು ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಹಾಗಾಗಿ ಪಾಲಕರು ಶಾಲೆಯ ಶಿಕ್ಷಣದ ಜತೆಜತೆಗೆ ಮನೆಯಲ್ಲಿಯೂ ಸಹ ಶಾಲೆಯಲ್ಲಿ ಕಲಿತ ಪಾಠವನ್ನು ಪುನರ್ ಮನನ ಮಾಡಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಪಾಲಕರು ಶಾಲಾ ಶುಲ್ಕ ಭರಿಸಿ ಸಮವಸ್ತ್ರ ತೊಡಿಸಿ ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ. ಬದಲಾಗಿ ಮಕ್ಕಳ ಜತೆ ಹೆಚ್ಚು ಸಮಯ ಕೊಟ್ಟು ಪಠ್ಯ ಮತ್ತು ಸಂಸ್ಕಾರ ಕಲಿಸಬೇಕು. ಟಿ.ವಿ ಮತ್ತು ಮೊಬೈಲ್ ಕಡೆ ಹೆಚ್ಚು ಗಮನ ಕೊಡದಂತೆ ಜಾಗೃತೆ ವಹಿಸಬೇಕು. ಅಂಕ ಗಳಿಕೆಗೆ ಮಾತ್ರ ಪ್ರಾಧಾನ್ಯತೆ ನೀಡದೆ ಮಾನವೀಯ ಮೌಲ್ಯಗಳು, ಉತ್ತಮ ಸಂಸ್ಕಾರ, ನಡೆ ನುಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಆಗ ಮಾತ್ರ ಯಶಸ್ವಿ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಉಪಾಧ್ಯಕ್ಷ ಎನ್.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಸಂಸ್ಥಾಪಕ ಕಾರ್ಯದರ್ಶಿ ಎಚ್.ಎಚ್. ಸಾವಿತ್ರಿ,ಆಡಳಿತ ಮಂಡಳಿ ಸದಸ್ಯರಾದ ಎಂ.ಎಲ್.ಸರಸ್ವತಿ, ನಟೇಶ್, ಮುಖ್ಯೋಪಾಧ್ಯಾಯಿನಿ ಸುಕನ್ಯಾ ಹಾಗೂ ಇತರರು ಇದ್ದರು.