ಚಿತ್ರದುರ್ಗ: ಆರೋಗ್ಯವೇ ಮಹಾಭಾಗ್ಯ ಆಗಿದ್ದು, ಜನರು ತಮ್ಮಲ್ಲಿಯೇ ಇರುವ ನೆಮ್ಮದಿಗಾಗಿ ಬೇರೆಡೆ ಹುಡುಕುವ ಕಾರ್ಯ ಮಾಡುತ್ತಿದ್ದಾರೆ ಎಂದು ರಿದ್ಧಿ ಫೌಂಡೇಷನ್ ಸಂಸ್ಥಾಪಕಿ, ಡಿವೈಎಸ್ಪಿ ರೇವತಿ ರಾಮ್ ಬೇಸರಿಸಿದರು.
ರಿದ್ಧಿ ಫೌಂಡೇಷನ್ ಸಂಸ್ಥೆ ನಗರದ ವಿ.ಪಿ.ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯೋಗಿಕ್ ನೃತ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನಿಷತ್‌ಗಳಲ್ಲಿ ಹೇಳಿರುವ ಜ್ಞಾನ, ಸ್ವಾಮಿ ವಿವೇಕಾನಂದ ಸೇರಿ ಅನೇಕ ಸಂತರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ, ಆರೋಗ್ಯ ಲಭಿಸಲಿದೆ. ಆದರೆ, ನಾವುಗಳು ಅನಗತ್ಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ ಗೊಂದಲಕ್ಕೆ ಸಿಲುಕುತ್ತಿದ್ದೇವೆ ಎಂದರು.
ದೇವಸ್ಥಾನಗಳಿಗೆ ಹೋಗುವ ನಾವು ದೇವರ ಬಳಿ ನಮ್ಮ ಮತ್ತು ಸಮಾಜದ ಒಳಿತಿಗೆ ಪ್ರಾರ್ಥಿಸುವ ಗುಣ ಬೆಳೆಸಿಕೊಳ್ಳಬೇಕು. ಆದರೆ, ಬಹಳಷ್ಟು ಮಂದಿ ನಮ್ಮ ಬೇಡಿಕೆ ಈಡೇರಿದರೆ ಇಂತಹ ವಸ್ತು ನಿನಗೆ ಕೊಡುತ್ತೇವೆ ಎಂದು ದೇವರಿಗೆ ಆಮಿಷವೊಡ್ಡುವುದು ಭಕ್ತಿಯ ಮಾರ್ಗವಲ್ಲ ಎಂದು ಹೇಳಿದರು.
ನಮ್ಮ ಆತ್ಮದ ಜತೆ ನಾವು ಮಾತನಾಡಬೇಕು. ಆಗ ಅದಮ್ಯ ಶಕ್ತಿ ಉದ್ಭವಾಗಿ ನಮ್ಮ ಕಷ್ಟಗಳು ಪರಿಹಾರವಾಗಲಿವೆ ಎಂದು ತಿಳಿಸಿದ ಅವರು, ಒಳ್ಳೆಯ ಗುಣ, ಸಹಾಯ ಹಸ್ತ, ಮತ್ತೊಬ್ಬರಿಗೆ ಒಳಿತು ಬಯಸುವ ನಡವಳಿಕೆಯಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದರು.
ಹತ್ತು ದಿನಗಳ ಕಾಲ ನಡೆಯುವ ಉಚಿತ ಶಿಬಿರದಲ್ಲಿ ನೃತ್ಯ, ಧ್ಯಾನದ ಮೂಲಕ ಜನರು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ದೇವರಾಜ ಅರಸು ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ಅನೇಕ ದೇಶಗಳು ಭಾರತೀಯ ಆಧ್ಯಾತ್ಮಿಕ ಜ್ಞಾನಭಂಡಾರವನ್ನು ಅನುಸರಿಸುತ್ತಿವೆ ಎಂದರು.
ನಾಗರಿಕ ಪ್ರಪಂಚದಲ್ಲಿ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇವುಗಳ ಪ್ರವೇಶಕ್ಕೆ ತಡೆ ಹಾಕಲು ಧ್ಯಾನ, ಯೋಗ, ಹೀಲಿಂಗ್ ಸೇರಿ ಇತರೆ ಪದ್ಧತಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಋಷಿ ಮುನಿಗಳು, ಗಿಡಮೂಲಿಕೆ ಪಂಡಿತರ ಜ್ಞಾನವನ್ನು ಉತ್ತಮ ಪಡಿಸುವ ಜತೆಗೆ ಅವುಗಳ ಕುರಿತು ಅಧ್ಯಯನ ನಡೆಸಬೇಕು. ಜತೆಗೆ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಬದುಕು ನಮ್ಮದಾಗಿಸಿಕೊಳ್ಳಬಹುದು ಎಂದರು.
ಬಸವೇಶ್ವರ ಆಸ್ಪತ್ರೆ ವೈದ್ಯೆ ಡಾ.ಸುಧಾ ಮಾತನಾಡಿ, ರೋಗ ಗುಣಪಡಿಸಲು ವೈಜ್ಞಾನಿಕ ಪದ್ಧತಿ ಜತೆಗೆ ಪೂರ್ವಿಕರ ಜ್ಞಾನ ಬಳಕೆ ಅಗತ್ಯ ಎಂದರು. ಸಮಾರಂಭವನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಈ.ಮಹೇಶಬಾಬು ಉದ್ಘಾಟಿಸಿದರು. ಫೌಂಡೇಷನ್ ಕಾರ್ಯದರ್ಶಿ ಎಚ್.ಮಮತಾ, ಖಜಾಂಚಿ ಶೋಭಾ, ಟಿ.ಶಿವರುದ್ರಮ್ಮ ಇತರರು ಉಪಸ್ಥಿತರಿದ್ದರು.
*ಕೋಟ್
ಎಲ್ಲ ಧರ್ಮಗಳು ಶಾಂತಿ-ನೆಮ್ಮದಿಯ ಸಂದೇಶ ನೀಡಿವೆ. ನಾವುಗಳು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿ, ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರಿಂದ ಹೊರಬರಲು ಆಧ್ಯಾತ್ಮಿಕ ಕೇಂದ್ರಗಳು ಹೆಚ್ಚು ಸಹಕಾರಿ ಆಗಿವೆ.
ಮುನೀರಾ ಎ.ಮಖಾಂದರ್
ರಾಜ್ಯ ಮಹಿಳಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ